ಬೆಂಗಳೂರು: ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದ ಪೋಷಕರಿಗೆ ಮತ್ತೊಂದು ಆತಂಕ ಎದುರಾಗಿದೆ.
ಬನ್ನೇರುಘಟ್ಟ ರಸ್ತೆಯ ಸಿಕೆ ಪಾಳ್ಯದ ನಿವಾಸಿ ಅಜಯ್ (24) ಕಾಣೆಯಾದ ಯುವಕ. ಮೈಕೋಲೇಔಟ್ನ ರಾಯಲ್ ಎನ್ಫೀಲ್ಡ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಅಜಯ್, ಕಳೆದ ಸೆಪ್ಟೆಂಬರ್ 16ರಂದು ಕೆಲಸ ಮುಗಿಸಿ ಮನೆಗೆ ಹಿಂದಿರುಗಿರಲಿಲ್ಲ.
ಮಗ ಕೆಲಸಕ್ಕೆ ಹೋದವನು ಮನೆಗೆ ಬರದೆ ಕಾಣೆಯಾಗಿದ್ದಾನೆ ಎಂದು ಯುವಕನ ಪೋಷಕರು ಮೈಕೋಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಇದೀಗ ಮಗನ ಮೊಬೈಲ್ನಿಂದ ಪೋಷಕರಿಗೆ ಕರೆ ಬಂದಿದ್ದು, ನಿಮ್ಮ ಮಗನ ಶವ ಕಳಿಸುತ್ತೇವೆ, ಹಾರ ಹಾಕಿ ಸ್ವಾಗತಿಸಿ ಎಂದು ಅಪಹರಣಾಕಾರರು ಹೇಳಿ, ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಇದರಿಂದ ಆತಂಕಗೊಂಡಿರುವ ಯುವಕನ ಕುಟುಂಬದವರು ಪೊಲೀಸ್ ಠಾಣೆಗೆ ತೆರಳಿ ತಮ್ಮ ಮಗನನ್ನು ಹುಡುಕಿಕೊಡುವಂತೆ ಪೊಲೀಸರ ಮುಂದೆ ಗೋಳು ತೋಡಿಕೊಂಡಿದ್ದಾರೆ.
ಇದೀಗ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೈಕೋಲೇಔಟ್ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.