ಬೆಂಗಳೂರು: ನಮ್ಮದು ನೂರಕ್ಕೆ ನೂರರಷ್ಟು ಬಿಜೆಪಿ ಸರ್ಕಾರ. ಯಾರು ಪಕ್ಷ ಬದಲು ಮಾಡಿರುತ್ತಾರೋ ಅವರು ಮಾತ್ರ ಇದು ಮೂರು ಪಕ್ಷದ ಸರ್ಕಾರ ಎಂದು ಹೇಳಲು ಸಾಧ್ಯ ಎಂದು ಸಚಿವ ಸಿ.ಪಿ.ಯೋಗೇಶ್ವರ್ಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದ್ದಾರೆ.
ತಾವರೆಕೆರೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಪಕ್ಷಗಳ ಸರ್ಕಾರ ಎಂದು ಸಚಿವ ಯೋಗೇಶ್ವರ್ ಹೇಳಿದ್ದಾರೆ. ಯಾರೇ ಆಗಲಿ ಮೂರು ಪಕ್ಷ ಅಂತಾ ಹೇಳಲು ಹೋಗಬಾರದು. ಯಾರು ಪಕ್ಷ ಬದಲು ಮಾಡಿರುತ್ತಾರೋ ಅವರು ಮಾತ್ರ ಈ ರೀತಿ ಹೇಳಲು ಸಾಧ್ಯ. ಯಾವ ಆಧಾರದಲ್ಲಿ ಹೇಳುತ್ತಾರೋ ಗೊತ್ತಿಲ್ಲ. ಇವರು ಬಿಜೆಪಿ ಸಚಿವರು, ಪಕ್ಷಕ್ಕೆ ಸೀಮಿತ ಇರಬೇಕಾಗುತ್ತದೆ ಎಂದರು.
ಪ್ರತಿಪಕ್ಷಗಳ ಕೆಲ ಸಲಹೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕಾಗುತ್ತದೆ. ಪ್ರತಿಪಕ್ಷಗಳು ಕೆಲವು ಸಲ ಸಲಹೆ ಕೊಡುತ್ತೆ. ಕೆಲವು ಸಲ ಕೆಲ ತೊಂದರೆ ಆಗುತ್ತದೆ ಅಂತಾ ಸಿಎಂ ಗಮನಕ್ಕೆ ತರುತ್ತಾರೆ. ಪ್ರತಿಪಕ್ಷ ನಾಯಕರಿಗೂ ಕೂಡ ಸಿಎಂ ಮನ್ನಣೆ ಕೊಡುವಂತಹದ್ದು ಇದೆ. ಕುಮಾರಸ್ವಾಮಿ ಹಲವು ಸಲಹೆಗಳನ್ನು ಕೊಡ್ತಾರೆ, ಒಳ್ಳೆಯದೂ ಕೂಡ ಕೊಡ್ತಾರೆ. ಸಿಎಂ ಅದರ ಕಡೆ ಗಮನ ಕೂಡ ಕೊಡ್ತಾರೆ. ಅಷ್ಟಕ್ಕೇ ಅವರು ಸಚಿವರಾಗಿದ್ದುಕೊಂಡೂ ಕೂಡ ಮೂರು ಪಕ್ಷದ ಸರ್ಕಾರ ಅಂತಾ ಹೇಳೋದು ಸರಿಯಲ್ಲ ಎಂದಿದ್ದಾರೆ.
ಮೈಸೂರು ಡಿಸಿ ವರ್ಗಾವಣೆ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈ ಹಿಂದೆ ಈ ರೀತಿ ಆಗಿರಲಿಲ್ಲ. ನಾಳೆ ಸಿಎಂ ಸಭೆಗೂ ಮುನ್ನ ಸಭೆ ಮಾಡಿ ಏನು ಸಮಸ್ಯೆ ಅಂತಾ ನೋಡುತ್ತೇನೆ. ಮೂರ್ನಾಲ್ಕು ದಿನಗಳಿಂದ ಜಟಾಪಟಿ ಆರಂಭವಾಗಿರುವುದನ್ನು ಗಮನಿಸಿದ್ದೇನೆ. ಡಿಸಿ ಬಗ್ಗೆ ಯಾರ್ಯಾರು ಮಾತಾಡಿದ್ದಾರೋ ಅವರ ಜೊತೆ ಮಾತಾಡಿ ಸರಿ ಮಾಡಿದ್ದೇನೆ. ನಾಳೆ ಸಭೆಗೆ ಸಂಸದರನ್ನೂ ಕರೆದಿದ್ದೇನೆ. ಸಮಸ್ಯೆ ಪರಿಹರಿಸುತ್ತೇನೆ ಎಂದರು.
ವಿಜಯೇಂದ್ರ ಹಸ್ತಕ್ಷೇಪವಿಲ್ಲ:
ನೂರಕ್ಕೆ ನೂರು ವಿಜಯೇಂದ್ರಗೂ ಆಡಳಿತಕ್ಕೂ ಸಂಬಂಧ ಇಲ್ಲ. ಅವರು ಪಕ್ಷದ ಉಪಾಧ್ಯಕ್ಷ, ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ತಾರೆ. ನಾವು ಸರ್ಕಾರದ ಕೆಲಸದಲ್ಲಿ ವಿಜಯೇಂದ್ರರನ್ನು ಭೇಟಿ ಮಾಡಿದ ನಿದರ್ಶನ ಒಂದೂ ಇಲ್ಲ. ಸರ್ಕಾರಕ್ಕೆ ಸಿಎಂ ಇರ್ತಾರೆ, ವಿಜಯೇಂದ್ರ ಆಡಳಿತದಲ್ಲಿ ತಲೆ ಹಾಕಿದ್ದು ಇಲ್ಲ ಎಂದು ವಿಜಯೇಂದ್ರ ಪರ ಸೋಮಶೇಖರ್ ಬ್ಯಾಟಿಂಗ್ ಮಾಡಿದರು.