ಬೆಂಗಳೂರು : ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದರೂ ವರ್ಗಾವಣೆಗಾಗಿ ಯತ್ನಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ಅಧಿಕಾರಿ ಮತ್ತು ಇತರೆ ಸಿಬ್ಬಂದಿ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾತ್ರ ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ನೌಕರರು, ಕರ್ನಾಟಕ ವಸತಿ ಶಿಕ್ಷಣ ಸಂಘ, ನಿಗಮ ಮಂಡಳಿಗಳು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಪದೇಪದೆ ವಿವಿಧ ಕಾರಣಗಳನ್ನು ನೀಡಿ ನೇರವಾಗಿ ವರ್ಗಾವಣೆಗೆ ಕೋರಿಕೆ ಸಲ್ಲಿಸುತ್ತಿದ್ದಾರೆ. ವಿವಿಧ ಮೂಲಗಳ ಮೂಲಕ ಶಿಫಾರಸು ಹಾಗೂ ಒತ್ತಡ ಹೇಳುತ್ತಿರುವ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆ ಈ ಸೂಚನೆ ನೀಡಲಾಗಿದೆ.
ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ನಂತರವೂ ದೈನಂದಿನ ಕಚೇರಿಯ ಅಧಿಕೃತ ಕೆಲಸ ಕಾರ್ಯಗಳನ್ನು ಬದಿಗೊತ್ತಿ ವರ್ಗಾವಣೆಗಾಗಿ ಸಚಿವರ ಕಚೇರಿ, ಸಚಿವಾಲಯ ಹಾಗೂ ಕೇಂದ್ರ ಕಚೇರಿಗಳಲ್ಲಿ ಓಡಾಡುತ್ತಿರುವುದು ಹಾಗೂ ಮಧ್ಯವರ್ತಿಗಳಿಂದಾಗಿ ವರ್ಗಾವಣೆ ದಂಧೆಯಾಗಿ ಮಾರ್ಪಟ್ಟಿರುವ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಆರೋಪ ಕೇಳಿ ಬರುತ್ತಿದೆ.
ಕೆಲ ಆಯಕಟ್ಟಿನ ಹುದ್ದೆಗಳಲ್ಲಿ ನಿಯಮ ಮೀರಿ ಅನರ್ಹರು ಪ್ರಭಾರದಲ್ಲಿದ್ದಾರೆ. ಒಂದು ಹುದ್ದೆಯಲ್ಲಿ ಅನೇಕ ವರ್ಷಗಳಿಂದ ಮುಂದೆವರೆದಿರುವುದು ಇಲಾಖೆಯ ಆಡಳಿತದ ಮೇಲೆ ನೇರ ವ್ಯತಿರಿಕ್ತ ಪ್ರಭಾವ ಬೀರುತ್ತಿರುವುದರಿಂದ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ಅಧಿಕಾರಿ ಮತ್ತು ಇತರೆ ಸಿಬ್ಬಂದಿ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾತ್ರ ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ.
ಇಲಾಖೆಯ ಎಲ್ಲಾ ಹಂತದ ಅಧಿಕಾರಿ-ಸಿಬ್ಬಂದಿ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕವೇ ಕೈಗೊಳ್ಳಲು ಹಾಗೂ ನೌಕರರ ಹಿತದೃಷ್ಟಿಯಿಂದ, ಗಂಭೀರ ಮಾರಣಾಂತಿಕ ಕಾಯಿಲೆ, ನಿವೃತ್ತಿ ಅಂಚಿನ ನೌಕರರು, ವಿಶೇಷಚೇತನರು, ವಿಧವೆ ಸೇರಿ ವಿಶೇಷ ಪ್ರಕರಣಗಳಿಗೆ ವಿನಾಯಿತಿ ನೀಡುವುದನ್ನು ಪರಿಗಣಿಸಿ, ಇಲಾಖಾ ವರ್ಗಾವಣೆ ಮಾರ್ಗಸೂಚಿ ಹಾಗೂ ನಿಯಮಗಳನ್ನು ಜಾರಿಗೆ ತರಲು, ಅಗತ್ಯವಿದ್ದಲ್ಲಿ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಲು ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.