ಬೆಂಗಳೂರು: ಇಷ್ಟ ಬಂದಂತೆ ಮಾತನಾಡಿ ನಂತರ ಕ್ಷಮೆ ಕೇಳಿದರೆ ಆಯಿತಾ? ಜವಾಬ್ದಾರಿಯುತ ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿದ್ದು ಈ ರೀತಿ ಉಡಾಫೆಯಾಗಿ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ತಲೆ ಕೆಟ್ಟಿದೆ. ಅವರಿಗೆ ಚಿಕಿತ್ಸೆ ಅವಶ್ಯಕತೆ ಇದೆ ಎನಿಸುತ್ತಿದೆ. ಅವರು ಸಿದ್ದರಾಮಯ್ಯ ಆಗಿಲ್ಲ, ಉಡಾಫೆ ರಾಮಯ್ಯ ಆಗಿದ್ದಾರೆ ಎಂದು ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಿನ್ನೆ ಮೈಸೂರಿನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಜ್ಯದ ಜನರು ಗೌರವದಿಂದ ನೋಡುತ್ತಾರೆ. ಹಿಂದೆ ದಲಿತರು ಹೊಟ್ಟೆಪಾಡಿಗೆ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ್ದರು. ಜನತೆಗೆ ವಿಡಿಯೋ ತೋರಿಸಿದ ಮೇಲೆ, ಅದು ಸುಳ್ಳು ಎಂದು ಹೇಳಿದ್ದರು.
ನಿನ್ನೆ ಬಿಜೆಪಿಯನ್ನು ನಿಂದಿಸುವ ಬರದಲ್ಲಿ, ಹಜಾಮತ್ ಮಾಡ್ತಿದ್ರಾ ಎಂದು ಕೇಳಿದ್ದಾರೆ. ಸವಿತಾ ಸಮಾಜದವರನ್ನು ಗೌರವಯುತವಾಗಿ ನೋಡುತ್ತಿದ್ದೇವೆ. ಸವಿತಾ ಸಮಾಜದವರನ್ನು ಹಜಾಮತ್ ಎಂದು ಹೇಳಿ ಅಪಮಾನ ಮಾಡಿದ್ದಾರೆ. ಇವರು ದಲಿತ ವಿರೋಧಿಗಳಾಗಿದ್ದಾರೆ. ಇಂತಹ ನಾಯಕರನ್ನು ಮೊದಲು ತಿರಸ್ಕಾರ ಮಾಡಿ ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದರು.
ತಕ್ಷಣ ತಮ್ಮ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇವರು ಯಾವ ದೊಡ್ಡ ನಾಯಕರು. ಇವರು ಕಾಂಗ್ರೆಸ್‌ಗೆ ದೊಡ್ಡ ಕಂಟಕ. ಇವರು ಆರು ತಿಂಗಳೂ ಕಾಂಗ್ರೆಸ್‌ನಲ್ಲಿ ಇರೋದಿಲ್ಲ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಶನಿ ಇದ್ದಂಗೆ ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ. ಮಾಡಬಾರದ್ದನ್ನು ಮಾಡಿ ಕ್ಷಮೆ ಕೇಳಬಹುದಾ.? ಸಿದ್ದರಾಮಯ್ಯ ಅವರು ಮಾತ್ರ ಕ್ಷಮೆ ಕೇಳಬಹುದಾ.? ನೀವು ಎಲ್ಲರ ರೀತಿ ಸಾಮಾನ್ಯ ಪ್ರಜೆಯಾ.? ಇಷ್ಟ ಬಂದಂತೆ ಏಕವಚನದಲ್ಲಿ ಮಾತಾಡುತ್ತಿದ್ದೀರಿ. ನಿಮ್ಮ ನಾಲಗೆ ಸ್ಥಿಮಿತದಲ್ಲಿ ಇದೆಯಾ.? ನಿಮಗೆ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಸಿದ್ದರಾಮಯ್ಯ ವಿರುದ್ಧ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಪಿಎಸ್ಐ ಅಕ್ರಮದಲ್ಲಿ ಕಾನ್ಸ್ಟೇಬಲ್ನಿಂದ ಹಿಡಿದು ಡಿವೈಎಸ್ಪಿಯವರೆಗೆ ಒಳಗೆ ಹಾಕಿದ್ದೇವೆ: ಸಚಿವ ಕಾರಜೋಳ