ಬೆಂಗಳೂರು: ಜನರ ತೀರ್ಪು ಏನೇ ಇದ್ದರೂ ಒಪ್ಪಬೇಕು. ಆದರೆ ಜನರ ವಿಶ್ವಾಸ ಗಳಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಜನ ಬಿಜೆಪಿ ಕುತಂತ್ರ ಧಿಕ್ಕರಿಸಿ ಮಮತಾ ಬ್ಯಾನರ್ಜಿಗೆ ಮೂರನೇ ಬಾರಿ ಆಶೀರ್ವಾದ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹೆಣ್ಣುಮಗಳ ವಿರುದ್ಧ ಗೆಲ್ಲಲು ಹೋರಾಡಿದ್ದರು. ಸಾಕಷ್ಟು ಟಿಎಂಸಿ ನಾಯಕರನ್ನು ಆಪರೇಷನ್ ಮಾಡಿದ್ದರು. ಆದರೆ ಸುವೇಂದು ಮುಖರ್ಜಿ ಅವರ ವಿರುದ್ಧ ಸೆಡ್ಡು ಹೊಡೆದು ನಂದಿಗ್ರಾಮಕ್ಕೆ ತೆರಳಿ ಸೆಣೆಸಿದ್ದ ಅವರು ಇಂದು ಗೆದ್ದಿದ್ದಾರೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗೆದ್ದಿದ್ದಾರೆ. ಅಲ್ಲಿನ ಮತದಾರರನ್ನು ಅಭಿನಂದಿಸುತ್ತೇನೆ ಎಂದರು.
ಅಧಿಕಾರಕ್ಕೆ ಬರುವ ಅಮಿತ್ ಷಾ ಕನಸು ನುಚ್ಚು ನೂರಾಗಿದೆ. ಎಲ್ಲಾ ಐದು ರಾಜ್ಯದಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ. ಕಾಂಗ್ರೆಸ್ಗೆ ಹಿನ್ನಡೆ ಆಗಿದೆ. ಕೇರಳದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ನಿರೀಕ್ಷಿಸಿದ್ದೆವು. ನಮಗಾದ ಹಿನ್ನಡೆ ಒಪ್ಪಬೇಕಿದೆ. ತಮಿಳುನಾಡಿನಲ್ಲಿ ನಾವು ಡಿಎಂಕೆ ಜತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿದ್ದೆವು. ನಾವು ಲೀಡಲ್ಲಿದ್ದೇವೆ. ಡಿಎಂಕೆ ಅಧಿಕಾರಕ್ಕೆ ಬರಲಿದೆ. ಸ್ಟ್ಯಾಲಿನ್ಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿ ಕೇರಳ, ತಮಿಳುನಾಡಿನಲ್ಲಿ ಖಾತೆ ತೆರೆದಿಲ್ಲ. ಸಂಪೂರ್ಣ ಶೂನ್ಯ ಗಳಿಕೆ ಆಗಿದೆ. ದಕ್ಷಿಣ ಭಾರತದ ರಾಜ್ಯದಲ್ಲಿ ಕೋಮುವಾದಿ ಪಕ್ಷ ಬೆಳೆಯಲು ಅವಕಾಶ ನೀಡಿಲ್ಲ. ಕರ್ನಾಟಕದಲ್ಲೂ ಅವರು ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದಾರೆ. ಪುದುಚೇರಿ ಫಲಿತಾಂಶ ಬಂದಿಲ್ಲ. ಏನು ಬೇಕಾದರೂ ಆಗಬಹುದು. ಅಸ್ಸಾಂನಲ್ಲಿ ಸೂಪರ್ ಮೆಜಾರಿಟಿ ಬಂದಿದೆ ಎಂದರು.
ಐದು ರಾಜ್ಯ ಫಲಿತಾಂಶ ಗಮನಿಸಿದಾಗ ಬಿಜೆಪಿ ನಿರೀಕ್ಷೆ ಹುಸಿಯಾಗಿದೆ. ಪಶ್ಚಿಮ ಬಂಗಾಳ ದೊಡ್ಡ ಹೊಡೆತ ಕೊಟ್ಟಿದೆ. ನರೇಂದ್ರ ಮೋದಿ ಕುತಂತ್ರ ಮಾಡಿದ್ದರು. ಕೊರೊನಾ ಇದ್ದರೂ ದೊಡ್ಡ ಸಭೆ ನಡೆಸಿದ್ದರು. ಎಂಟು ಹಂತದ ಚುನಾವಣೆ ಮಾಡಿ ತಂತ್ರಗಾರಿಕೆ ಮಾಡಿದ್ದರೂ ವಿಫಲವಾಗಿದೆ ಎಂದರು.
ರಾಜ್ಯದ ಮಸ್ಕಿಯಲ್ಲಿ 30 ಸಾವಿರ ಲೀಡಲ್ಲಿ ಗೆದ್ದಿದ್ದೇವೆ. ಬಸವಕಲ್ಯಾಣದಲ್ಲಿ ಜೆಡಿಎಸ್ ಪಕ್ಷ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕದಿದ್ದರೆ ಅಲ್ಲಿಯೂ ಗೆಲ್ಲುವ ಅವಕಾಶ ಇತ್ತು. ಎಂದರು.
ವಿಜಯೇಂದ್ರ ಚಾಣಕ್ಯ ಅಲ್ಲ. ಹಣ ಕೊಟ್ಟು ಗೆಲ್ಲುತ್ತಾ ಬಂದಿದ್ದರು. ಆದರೆ ಮಸ್ಕಿ ಜನ ಹಣದ ಆಮಿಷ ಧಿಕ್ಕರಿಸಿ ನಮ್ಮವರನ್ನುಗೆಲ್ಲಿಸಿದ್ದಾರೆ. ಜನರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ. ದೊಡ್ಡ ಅಂತರದಲ್ಲಿ ಗೆಲ್ಲಿಸಿದ್ದಾರೆ. ಗೆದ್ದ ಬಸನಗೌಡ ತುರುವೀಹಾಳ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಸವಕಲ್ಯಾಣದಲ್ಲಿ ಅಭ್ಯರ್ಥಿ ದುರ್ಬಲರಲ್ಲ. ಆಡಳಿತ ಪಕ್ಷಕ್ಕೆ ಅನುಕೂಲ ಹೆಚ್ಚು. ಅಭ್ಯರ್ಥಿಗೆ ಹಣಕಾಸಿನ ತೊಂದರೆ ಇತ್ತು. ಈಶ್ವರ್ ಖಂಡ್ರೆ ಕೊರೊನಾಗೆ ತುತ್ತಾದರು. ನಮ್ಮ ನಾಯಕರು ಸಾಕಷ್ಟು ಶ್ರಮಿಸಿದ್ದಾರೆ. ಆದರೂ ಜೆಡಿಎಸ್ ಅಭ್ಯರ್ಥಿಯಿಂದ ನಮಗೆ ಹಿನ್ನಡೆಯಾಯಿತು ಎಂದರು.
ಕಾಂಗ್ರೆಸ್ ಎಲ್ಲಿ ಎಡವಿದೆ, ನಮಗೆ ಏಕೆ ಹಿನ್ನಡೆಯಾಗಿದೆ ಎಂದು ತಿಳಿಯಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ನಾನೂ ಸೇರಿದಂತೆ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ನಮ್ಮಲ್ಲಿ ಸುಧಾರಣೆ ಮಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಬಣ್ಣ ಬಯಲಾಗಿದೆ. ಜನ ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ. ಸೋಲು ಗೆಲುವು ಮಾನದಂಡವಲ್ಲ. ಅಂತರವನ್ನೂ ಗಮನಿಸಬೇಕು ಎಂದು ಹೇಳಿದರು.
ಬೆಳಗಾವಿಯಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ನಾವು ನಾಲ್ಕು ಕಡೆ ಸಭೆ ನಡೆಸಿದ್ದೆವು. ಸತೀಶ್ ಉತ್ತಮ ಸ್ಫರ್ಧೆ ನೀಡಿದ್ದರು. ಸೋತು ಗೆದ್ದಿದ್ದಾರೆ. ಆರೇಳು ಸಾವಿರ ಮತಗಳ ಅಂತರದ ಗೆಲುವು ನಿರೀಕ್ಷಿಸಿದ್ದೆವು. ನಮಗೆ ರಾಜಕೀಯವಾಗಿ ದೊಡ್ಡ ಹಿನ್ನಡೆ ಅಲ್ಲ. ರಾಜಕೀಯ ಗಳಿಕೆ ಆಗಿದೆ. ದೊಡ್ಡ ಅಂತರ ಮುರಿದಿದ್ದೇವೆ. ಸೋಲು ಸೋಲೇ, ಆದರೆ ನಾವು ಜನರ ಒಲವು ಗಳಿಸಿದ್ದೇವೆ. ಬಿಜೆಪಿ ಆಡಳಿತ ಯಂತ್ರವೇ ಅಲ್ಲಿತ್ತು. ಇನ್ನೂ ಸ್ವಲ್ಪ ಕಸರತ್ತು ಮಾಡಿದ್ದರೆ ಗೆಲ್ಲಬಹುದಿತ್ತು ಎಂದರು.