ಬೆಂಗಳೂರು : ಮೈಸೂರಿನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕುರಿತಾಗಿ ನಿಯಮ 60ರಡಿ ಚರ್ಚಿಸಲು ಅವಕಾಶ ಕೊಡಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಕೋರಿದರು. ನಿಯಮ 60ರಡಿ ಚರ್ಚೆ ಮಾಡಲು ಅವಕಾಶ ಕೊಡಬೇಕೆ ಅಥವಾ ನಿಯಮ 69ಕ್ಕೆ ಬದಲಿಸಿ ಕೊಡಬೇಕೆ ಎಂಬುದರ ಬಗ್ಗೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿಯಮ 60ರಡಿ ವಿಷಯ ಪ್ರಸ್ತಾಪಿಸಲು ಮುಂದಾದರು. ಆಗ, ಇತ್ತೀಚೆಗೆ ನಿಯಮ 60ರ ಬದಲು 69ಕ್ಕೆ ಇದನ್ನು ಪರಿವರ್ತಿಸಿ ನಾನು ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದಾಗ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಅವರು, ವಿಧಾಸಭೆಯಲ್ಲಿ ನಿಯಮ 60 ಅನ್ನು ಜಾರಿಗೆ ತಂದಿರುವ ಉದ್ದೇಶವೇ ಸಾರ್ವಜನಿಕ ಮಹತ್ವದ ವಿಷಯಗಳನ್ನು ಚರ್ಚಿಸಲು.
ಪ್ರತಿಪಕ್ಷ ಸೇರಿದಂತೆ ಎಲ್ಲರೂ ವಿಷಯದ ಗಾಂಭೀರ್ಯತೆ ಕುರಿತು ಚರ್ಚಿಸಬೇಕು. ಸರ್ಕಾರ ಇದಕ್ಕೆ ಉತ್ತರ ನೀಡಬೇಕು. ಹೀಗಾಗಿಯೇ, ಈ ನಿಯಮಕ್ಕೆ ಬಹಳ ಮಹತ್ವವಿದೆ ಎಂದು ಮನವರಿಕೆ ಮಾಡಿದರು.
ಎಲ್ಲರೂ ನಿಮಯ 60ರಡಿಯೇ ಚರ್ಚೆಗೆ ಕೇಳ್ತಾರೆ : ಪ್ರತಿ ವಿಷಯವನ್ನು ನಿಯಮ 60ರಡಿ ತಂದರೆ ಈ ನಿಯಮದ ಪಾವಿತ್ರತೆ ಉಳಿದಿದೆಯೇ ಎಂದು ನನಗೆ ಅನಿಸುವುದಿಲ್ಲ. ಕಾಂಗ್ರೆಸ್‍ನವರು ಅದೇ ನಿಯಮದಡಿ ಚರ್ಚೆಗೆ ಕೇಳುತ್ತಾರೆ. ಜೆಡಿಎಸ್‍ನವರು ಕೂಡ ಅದೇ ನಿಯಮದಡಿ ಚರ್ಚಿಸಬೇಕು ಎನ್ನುತ್ತಾರೆ. ನಾವು ಎಲ್ಲ ವಿಷಯಗಳನ್ನು ಇದರಡಿಯೇ ಚರ್ಚಿಸಬೇಕೆಂದರೆ ಸಾಧ್ಯವೇ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದರು.
ನಾವು ಪ್ರತಿಪಕ್ಷದಲ್ಲಿದ್ದಾಗ ಇದನ್ನೇ ಮಾಡುತ್ತೇವೆ. ಎಲ್ಲ ವಿಷಯಗಳನ್ನು ಅದೇ ನಿಯಮದಡಿ ಚರ್ಚೆ ಮಾಡಬೇಕೆಂಬ ಮಾನಸಿಕ ಸ್ಥಿತಿಗೆ ಹೋಗಬೇಕು. ಏನೋ ಬರೆದುಕೊಟ್ಟರೆ ನಿಯಮ 60ರಡಿ ಚರ್ಚೆಗೆ ಕೊಡುತ್ತಾರೆ ಎಂಬ ಮನಸ್ಥಿತಿ ಇದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಎಲ್ಲ ವಿಷಯಗಳನ್ನು ನಿಯಮ 60ರಡಿ ಚರ್ಚಿಸಲು ಸಾಧ್ಯವಿಲ್ಲ. ವಿಷಯದ ಗಂಭೀರತೆ, ತುರ್ತಾಗಿ ಚರ್ಚಿಸಬೇಕಾದ ವಿಷಯಗಳು ಇದ್ದರೆ ಮಾತ್ರ ತೆಗೆದುಕೊಳ್ಳಬೇಕು. ಒಂದು ಬಾರಿ ಪ್ರಸ್ತಾವನೆ ಮತ್ತೊಂದು ಬಾರಿ ಚರ್ಚೆಗೆ ಅವಕಾಶ ನೀಡುತ್ತಾ ಹೋದರೆ ಹೇಗೆ? ನಿಯಮ 60ನ್ನು 4 ಗಂಟೆಯ ನಂತರ ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂದು ನಿಯಮವಿದೆ.
ಈಗಾಗಲೇ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಹೇಳಿದ ಮೇಲೆ ಪ್ರಸ್ತಾವನೆ ಅಗತ್ಯವೇ ಎಂದು ಪ್ರಶ್ನಿಸಿದರು. ನಂತರ ನಿಯಮ 69 ರಡಿ ಪ್ರಸ್ತಾಪಕ್ಕೆ ಅವಕಾಶ ನೀಡಿದ ಸ್ಪೀಕರ್, ಸೋಮವಾರ ವಿಷಯ ಪ್ರಸ್ತಾಪಿಸಲು ಹೇಳಿದರು. ಅದಕ್ಕೆ ಸಿದ್ದರಾಮಯ್ಯನವರು ಅಹ ಸಮ್ಮತಿ ವ್ಯಕ್ತಪಡಿಸಿದರು.