ಬೆಂಗಳೂರು: ಅಗಲಿದ ನಟಿ ಜಯಂತಿ ಅವರನ್ನು ನಾನು ಎವರ್ ಗ್ರೀನ್ ಹೀರೋಯಿನ್ ಅಂತಿದ್ದೆ, ಅವರು ನನ್ನನ್ನು ವಾಟ್ ಹೀರೋ ಅಂತಾ ಕೇಳುತ್ತಿದ್ದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಮರಿಸಿದರು.
ವಿಧಾನಸಭೆ ಮುಂಗಾರು ಅಧಿವೇಶನ ಆರಂಭವಾಗಿದ್ದು, ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಮಾತನಾಡಿದ ಸಿದ್ದರಾಮಯ್ಯ, ನಟಿ ಜಯಂತಿ ಅವರಿಗೆ ಅಭಿನಯ ಶಾರದೆ ಎಂಬ ಬಿರುದು ಸಿಕ್ಕಿತ್ತು. ವಿವಿಧ ಭಾಷೆಗಳಲ್ಲಿ ಸುಮಾರು 500 ಚಿತ್ರಗಳಲ್ಲಿ ಅಭಿನಯಿಸಿದ ನಟಿ ಅವರು. ಬಳ್ಳಾರಿಯಿಂದ ಬೆಂಗಳೂರಿಗೆ ಬಂದ ಅವರು ಓರ್ವ ಶ್ರೇಷ್ಠ ನಟಿಯಾದರು. ಅವರಿಗೆ ರಾಜಕೀಯದಲ್ಲೂ ಆಸಕ್ತಿ ಇತ್ತು. ಚಿಕ್ಕಬಳ್ಳಾಪುರದಲ್ಲಿ ಲೋಕಸಭೆ ಚುನಾವಣೆಯಲ್ಲಿ ನಿಂತು ಸೋತಿದ್ದರು ಎಂದು ನೆನಪಿಸಿಕೊಂಡರು.
ಅವರೊಬ್ಬ ಅಪ್ರತಿಮ ಕಲಾವಿದೆ. ಸ್ನೇಹ ಜೀವಿ ಆಗಿದ್ದರು. ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಿದ್ದರು. ರಾಜಕಾರಣಿಗಳನ್ನು ಪ್ರೀತಿಯಿಂದ ನೋಡುತ್ತಿದ್ದರು. ನಾನು ಅವರನ್ನು ಎವರ್ ಗ್ರೀನ್ ಹೀರೋಯಿನ್ ಎಂದು ಕರೆಯುತ್ತಿದ್ದೆ. ಆಗ ಅವರು ನನ್ನನ್ನು ವಾಟ್ ಹೀರೋ ಎಂದು ಕೇಳುತ್ತಿದ್ದರು ಎಂದು ಸ್ಮರಿಸಿದರು.
ರೈತ ಪರ ಹೋರಾಟದಲ್ಲಿ ಮಾದೇಗೌಡರ ಪಾತ್ರ ಅಪಾರ
ತಮ್ಮ ಸಂತಾಪ ಸೂಚನಾ ಭಾಷಣದಲ್ಲಿ ಸಿದ್ದರಾಮಯ್ಯ ಅವರು ರೈತ ಹೋರಾಟಗಾರ ದಿವಂಗತ ಡಾ. ಜಿ ಮಾದೇಗೌಡ ಅವರನ್ನೂ ನೆನಪಿಸಿಕೊಂಡರು. ಮಾದೇಗೌಡರನ್ನು ಕಾವೇರಿ ಪುತ್ರ ಎಂದು ಕರೆಯುತ್ತಿದ್ದರು. ರೈತರ ಹಿತಾಸಕ್ತಿಗಾಗಿ, ರೈತ ಪರವಾಗಿ ಹೋರಾಟದಲ್ಲಿ ಅವರ ಪಾತ್ರ ಅಪಾರವಾಗಿತ್ತು. ಮಂಡ್ಯದಲ್ಲಿ ಜನಜನಿತವಾದ ಹೆಸರು ಅವರದು. ನೇರ ನುಡಿಯ ನಾಯಕ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ದೊರೆಸ್ವಾಮಿ ಸಮಾಜದ ಆಸ್ತಿ
ಶತಾಯುಷಿಯಾಗಿದ್ದ ದಿ. ದೊರೆಸ್ವಾಮಿ ಅವರು ಯಾವತ್ತೂ ಕೂಡ ಯಾರ ಜೊತೆನೂ ರಾಜೀ ಮಾಡಿಲ್ಲ. ಹೋರಾಟದಲ್ಲಿ ಅವರು ರಾಜೀ ಮಾಡುತ್ತಲೇ ಇರುತ್ತಿರಲಿಲ್ಲ. ತಾತ್ವಿಕ ಅಂತ್ಯಕ್ಕೆ ತರುವ ತನಕ ಹೋರಾಟ ಬಿಡುತ್ತಿರಲಿಲ್ಲ. ಭೂಗಳ್ಳರಿಂದ ಭೂಮಿ ಕಿತ್ತು ಭೂಮಿ ಇಲ್ಲದವರಿಗೆ ಕೊಡಲು ಹೋರಾಟ ಮಾಡಿದ್ದವರು ಎಂದು ನೆನಪಿಸಿದರು.
ಅವರೊಬ್ಬ ಅಪ್ಪಟ ಗಾಂಧಿವಾದಿ. ಕೊನೆ ಕ್ಷಣದಲ್ಲಿ ಅವರಿಗೆ ಕೊರೊನಾ ಬಂತು. ದೊರೆಸ್ವಾಮಿ ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಯತ್ನಿಸಿದ್ದರು. ಅವರು ನಮ್ಮ ಸಮಾಜದ ಆಸ್ತಿಯಾಗಿದ್ದರು. ಗಾಂಧಿ ವಿಚಾರವನ್ನು ಹೇಗೆ ಪರಿಪಾಲನೆ ಮಾಡಬೇಕು ಎಂದು ಪ್ರತಿಪಾದಿಸುತ್ತಿದ್ದರು ಎಂದರು.
ಏಳು ಭಾಷೆ ಬಲ್ಲವರಾಗಿದ್ದರು ಉದಾಸಿ
ಸಿ.ಎಂ.ಉದಾಸಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, 10ನೇ ತರಗತಿಯಷ್ಟೇ ಓದಿದ್ದರೂ ಮಾಜಿ ಸಚಿವ ಸಿ.ಎಂ ಉದಾಸಿ ಅವರ ಭಾಷಾ ಜ್ಞಾನ ಅಪಾರವಾಗಿತ್ತು. ಅವರ ಗ್ರಹಿಕಾ ಶಕ್ತಿಯೂ ಉತ್ತಮವಾಗಿತ್ತು. ಒಟ್ಟು ಏಳು ಭಾಷೆಗಳನ್ನು ಬಲ್ಲವರಾಗಿದ್ದರು. ಇಷ್ಟು ಭಾಷೆ ಹೇಗೆ ಕಲಿತಿರಿ ಎಂದು ಅವರಲ್ಲಿ ಕೇಳಿದ್ದೆ, ಅದಕ್ಕೆ ಅವರು, ನಾನು ಭತ್ತದ ವ್ಯಾಪಾರಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾಗ ಅಲ್ಲಿನ ಭಾಷೆಯನ್ನು ಕಲಿಯುತ್ತಿದ್ದೆ ಎಂದಿದ್ದರು ಎಂದು ನೆನಪಿಸಿಕೊಂಡರು.
ಈಶ್ವರಪ್ಪಂಗೂ ನನಗೂ Love & Hate ಫ್ರೆಂಡ್ ಶಿಪ್:
ಸಂತಾಪ ಸೂಚನಾ ಭಾಷಣದ ವೇಳೆ ಮಾತನಾಡುತ್ತಿರುವ ವೇಳೆ ಈಶ್ವರಪ್ಪಗೆ ಕೇಳ್ತಿಲ್ವಂತೆ ನಿಮ್ಮ ವಾಯ್ಸ್ ಸರಿಯಾಗಿ ಕೇಳ್ತಿಲ್ಲವಂತೆ ನೋಡಿ, ಅವರ ಮೇಲೆ ಏನಾದ್ರೂ ಸಿಟ್ಟಿದೆಯಾ?. ನೀವು ಮೈಕ್ಗೆ ಪೇಪರ್ ಅಡ್ಡ ಹಿಡಿಯಬೇಡಿ, ಕೇಳಿಸೋದಿಲ್ಲ ಎಂದು ಸಿದ್ದರಾಮಯ್ಯಗೆ ರಮೇಶ್ ಕುಮಾರ್ ಹೇಳಿದರು. ಅದಕ್ಕೆ ಸಿದ್ದರಾಮಯ್ಯ, ಈಶ್ವರಪ್ಪನವರ ಮೇಲೆ ಸ್ನೇಹನೂ ಇದೆ, ವೈರತ್ವನೂ ಇದೆ. ವೈರತ್ವ ರಾಜಕೀಯವಾಗಿ ಮಾತ್ರ. ವೈಯುಕ್ತಿಕವಾಗಿ ಏನೂ ಇಲ್ಲ. ಈಶ್ವರಪ್ಪಂಗೂ ನನಗೂ ಲವ್ ಅಂಡ್ ಹೇಟ್ ಫ್ರೆಂಡ್ ಶಿಪ್ ಎಂದು ಸದನವನ್ನು ನಗೆಗಡಲಲ್ಲಿ ತೇಲಿಸಿದರು.