ಬೆಂಗಳೂರು: ಲಾಕ್‌ಡೌನ್ ಪರಿಣಾಮ ರಾಜ್ಯದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಅವರಿಗೆ ಮೈತ್ರಿ ಯೋಜನೆ ಅಡಿ ನೀಡುತ್ತಿರುವ 600 ರುಪಾಯಿ ಮಾಸಿಕ ಪಿಂಚಣಿಯನ್ನು ಎರಡು ತಿಂಗಳು ಮುಂಗಡವಾಗಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಲಾಕ್‌ಡೌನ್ ಜಾರಿಯಿಂದಾಗಿ ತೃತೀಯ ಲಿಂಗಿಗಳ ಪರಿಸ್ಥಿತಿ ಹದಗೆಟ್ಟಿದ್ದು, ಆಹಾರ ಹಾಗೂ ಹಣವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ, ಅವರಿಗೆ ಪಡಿತರ ಹಾಗೂ ಸಹಾಯಧನ ನೀಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಈ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ತೃತೀಯ ಲಿಂಗಿಗಳ ಸಮುದಾಯದ 1,657 ನೋಂದಾಯಿತ ಸದಸ್ಯರಿದ್ದಾರೆ. ಇವರಿಗೆ ಸರ್ಕಾರ ಮೈತ್ರಿ ಯೋಜನೆ ಅಡಿ ಮಾಸಿಕ 600 ರೂ. ಪಿಂಚಣಿ ನೀಡುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳ ಪಿಂಚಣಿಯನ್ನು ಮುಂಗಡವಾಗಿ ನೀಡಿದೆ. ಸಮುದಾಯದ ಎಲ್ಲಾ ಅರ್ಹ ಸದಸ್ಯರಿಗೂ ಈ ಯೋಜನೆಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ವಕೀಲರ ಹೇಳಿಕೆ ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ತೃತೀಯ ಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಪಡಿತರ ಇಲ್ಲವಾಗಿದೆ. ಇದರಿಂದ ಅವರು ಹಸಿವಿನಿಂದ ನರಳಾಡುತ್ತಿರುವ ಮಾಹಿತಿ ಇದೆ. ಅವರಲ್ಲಿ ರೇಷನ್ ಕಾರ್ಡ್ ಇಲ್ಲದಿರಬಹುದು. ಹೀಗಾಗಿ ಅವರು ರೇಷನ್ ಕಾರ್ಡ್ ಬಿಟ್ಟು ಇತರ ಯಾವುದೇ ಗುರುತಿನ ಚೀಟಿ ಹೊಂದಿದ್ದರೂ ಪಡಿತರ ವಿತರಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.