ಬೆಂಗಳೂರು: ದೇಶದ ಅತ್ಯುತ್ತಮ ವಾಸಯೋಗ್ಯ ನಗರವಾಗಿದ್ದ ಬೆಂಗಳೂರು ಈ ಬಾರಿ ಆ ಹೆಗ್ಗಳಿಕೆಯಿಂದ ಜಾರಿದೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ 'ವಾಸಯೋಗ್ಯ ನಗರಗಳ ರ‍್ಯಾಂಕಿಂಗ್ ಪಟ್ಟಿ'ಯಲ್ಲಿ ಸಿಲಿಕಾನ್ ಸಿಟಿಗೆ 5ನೇ ಸ್ಥಾನ ದೊರೆತಿದೆ.
ಜುಲೈ 4 ರಂದು ಬಿಡುಗಡೆಯಾದ ಸಮೀಕ್ಷೆ ಪಟ್ಟಿಯಲ್ಲಿ ಭಾರತದ ವಾಸಯೋಗ್ಯ ನಗರಗಳ ಪೈಕಿ ದೆಹಲಿ 1ನೇ ಸ್ಥಾನ ಪಡೆದರೆ, ಮುಂಬೈ, ಚೆನ್ನೈ, ಅಹಮದಾಬಾದ್ ನಂತರ ಬೆಂಗಳೂರಿಗೆ 5ನೇ ಸ್ಥಾನವಿದೆ. ಜಾಗತಿಕವಾಗಿ 173 ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು 146ನೇ ಸ್ಥಾನದಲ್ಲಿದೆ.
ಮೂಲಸೌಕರ್ಯ, ಸ್ಥಿರತೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಪರಿಸರ ಮೌಲ್ಯಮಾಪನವನ್ನು ಆಧರಿಸಿ ರ‍್ಯಾಂಕಿಂಗ್ ನೀಡಲಾಗಿದೆ. ಕಳೆದ ವರ್ಷದ ಅಧ್ಯಯನದಲ್ಲಿ ವೇಗವಾಗಿ ಬೆಳೆಯುತ್ತಿರುವ ಟೆಕ್ ಹಬ್ ಖ್ಯಾತಿಯ ಬೆಂಗಳೂರು ಮೊದಲ ಸ್ಥಾನದಲ್ಲಿತ್ತು. ಒಂದೇ ವರ್ಷದಲ್ಲಿ 5 ಸ್ಥಾನ ಜಾರಿದೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ಸ್ ಸಂಸ್ಥೆ ತಿಳಿಸಿದೆ.
ನಗರಗಳ ಸ್ಕೋರ್ ಎಷ್ಟು?: ಜಾಗತಿಕವಾಗಿ ಭಾರತೀಯ ನಗರಗಳಲ್ಲಿ ರಾಜಧಾನಿ ನವದೆಹಲಿ 56.5 ರ ವಾಸಯೋಗ್ಯ ಸ್ಕೋರ್‌ನೊಂದಿಗೆ ರ‍್ಯಾಂಕಿಂಗ್ ಪಟ್ಟಿಯಲ್ಲಿ 140ನೇ ಸ್ಥಾನ ಪಡೆದಿದೆ. ಮುಂಬೈ 141 (ಸ್ಕೋರ್ 56.2), ಚೆನ್ನೈ 142 (55.8), ಅಹಮದಾಬಾದ್ 143 (ಸ್ಕೋರ್ 55.7) ಮತ್ತು ಬೆಂಗಳೂರು 146 (ಸ್ಕೋರ್ 54.4) ನೇ ಸ್ಥಾನ ಪಡೆದಿದೆ.