ಬೆಂಗಳೂರು : 2020ರ ಕೊನೆಯ ದಿನವಾದ ಇಂದು ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ, ರೂಪಾಂತರಿ ಕೊರೊನಾ ಹರಡುವಿಕೆಯ ಭೀತಿಯಿಂದಾಗಿ ಇಂದು ಮಧ್ಯಾಹ್ನ 12 ಗಂಟೆಯಿಂದಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ನಿಷೇಧಾಜ್ಞೆಗೆ ಆದೇಶ ಹೊರಡಿಸಿದ್ದು, ಬೆಂಗಳೂರು ನಗರದಲ್ಲಿ ಕೊರೊನಾ ರೋಗ ಹರಡುವುದನ್ನು ನಿಯಂತ್ರಿಸಲು ಪರಿಷ್ಕೃತ ನಿಷೇಧಾಜ್ಞೆ ಆದೇಶವನ್ನು ಜಾರಿಗೊಳಿಸುವುದು ಅನಿವಾರ್ಯ ಎಂದಿದ್ದಾರೆ.
ಇದನ್ನೂ ಓದಿ: ಈ ಬಾರಿ ಅದ್ಧೂರಿ ಹೊಸ ವರ್ಷಾಚರಣೆ ಇಲ್ಲ : ಬೆಂಗಳೂರಿನಲ್ಲಿ ಡಿ.31ರ ಸಂಜೆ 6ರಿಂದ ನಿಷೇಧಾಜ್ಞೆ
ಡಿಸೆಂಬರ್ 31ರ ರಾತ್ರಿ ಹೊಸ ವರ್ಷದ ಆಚರಣೆಯ ವೇಳೆ ಜನ ಸೇರುವ ದೃಷ್ಟಿಯಿಂದ, ನಿಷೇಧಾಜ್ಞೆ ಆದೇಶದ ಅವಧಿಯನ್ನು ಪರಿಷ್ಕರಿಸುವ ಮೂಲಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತವೆಂದು ಪರಿಗಣಿಸಿದ್ದಾಗಿ ಅವರು ಹೇಳಿದ್ದಾರೆ.
ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಾಗಲಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಈ ಮೊದಲು ಡಿಸೆಂಬರ್ 31ರ ಸಂಜೆ ಆರು ಗಂಟೆಯಿಂದ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಆದೇಶಿಸಲಾಗಿತ್ತು.