ಬೆಂಗಳೂರು: ಹುಟ್ಟಿದ ಮಕ್ಕಳಲ್ಲಿ ರೋಗ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಸ್ಕ್ರೀನಿಂಗ್ ಟೆಸ್ಟ್ ಎಂಬ ಹೊಸ ಕಾರ್ಯಕ್ರಮವನ್ನು ಜಾರಿಗೊಳಿಸಲಿದ್ದು, ಈಗಾಗಲೇ ಸರ್ಕಾರದಿಂದ ಅನುಮೋದನೆ ದೊರೆತಿದೆ. ಎರಡು ತಿಂಗಳಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕೆ ಬರಲಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ವಲಯದಲ್ಲೂ ಇಂತಹ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸ್ಕ್ರೀನಿಂಗ್ ಟೆಸ್ಟ್ ಗೆ 3 ಸಾವಿರದಿಂದ 5 ಸಾವಿರ ರೂ.ವರೆಗೆ ವೆಚ್ಚವಾಗುತ್ತಿತ್ತು. ಇದನ್ನು ಪರಿಗಣಿಸಿ ಆರೋಗ್ಯ ಇಲಾಖೆ ಉಚಿತವಾಗಿ ರೋಗ ಪತ್ತೆ ಹಚ್ಚುವ ಸ್ಕ್ರೀನಿಂಗ್ ಟೆಸ್ಟ್ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ.
ಈ ಸೌಲಭ್ಯಕ್ಕಾಗಿ ಮೊದಲ ಹಂತದಲ್ಲಿ 14 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ಯಂತ್ರವನ್ನು ವಿದೇಶದಿಂದ ತರಿಸಿಕೊಳ್ಳಲಾಗುತ್ತಿದ್ದು, ಸ್ಕ್ರೀನಿಂಗ್ ಟೆಸ್ಟ್ ಮೂಲಕ ಬಹುಬೇಗ ರೋಗ ಮತ್ತೆ ಮಾಡಲಾಗುತ್ತದೆ. ಬಳಿಕ ಸಂಪೂರ್ಣ ವರದಿಯನ್ನು ನೀಡಲಾಗುತ್ತದೆ. ಇದರಿಂದ ಮುಂದೆ ಕೈಗೊಳ್ಳಬೇಕಾದ ಚಿಕಿತ್ಸೆಗೆ ಅನುಕೂಲಕರವಾಗಲಿದ್ದು, ರೋಗ ಪತ್ತೆ ಹಚ್ಚಲು ಸುಲಭ ವಿಧಾನವಾಗಿದೆ. ಆದ್ರೆ ಮಕ್ಕಳಲ್ಲಿನ ಕಿವುಡುತನ ಮತ್ತು ಶ್ರವಣದೋಷದ ಸಮಯೋಚಿತ ರೋಗ ನಿರ್ಣಯವನ್ನು ಪ್ರಾಯೋಗಿಕವಾಗಿ ನಡೆಸಲಾಗುವುದಿಲ್ಲ.
ಮಕ್ಕಳಲ್ಲಿ ಇತ್ತೀಚಿಗೆ ಸೋಂಕು ಕಾಯಿಲೆಗಳು ಹೆಚ್ಚಾಗುತ್ತಿದ್ದು, ರಕ್ತ ಪರೀಕ್ಷೆ ಮೂಲಕ ರೋಗ ಪತ್ತೆ ಹಚ್ಚಲಾಗುತ್ತಿತ್ತು. ಆದರೆ ಸೋಂಕಿನ ಜತೆಗೆ ಬೇರೆ ಕಾಯಿಲೆಗಳು ಇರುವಿಕೆ ಕುರಿತು ತಿಳಿಯುವುದು ಕಷ್ಟವಾಗುತ್ತಿತ್ತು. ಈ ಮೂಲಕ ಸ್ಕ್ರೀನಿಂಗ್ ಟೆಸ್ಟ್ ಎಂಬ ಹೊಸ ಕಾರ್ಯಕ್ರಮವನ್ನು ಜಾರಿಗೆ ಆರೋಗ್ಯ ಇಲಾಖೆ ಮುಂದಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಈ ಯೋಜನೆ ರೂಪಿಸಲಾಗುತ್ತಿದ್ದು, ಮೈಸೂರು, ಬೆಂಗಳೂರು, ಕಲಬುರಗಿ, ಬೆಳಗಾವಿಯಲ್ಲಿ ಮೊದಲು ಆರಂಭವಾಗಲಿದೆ. ನಂತರ ಇತರೆ ಜಿಲ್ಲೆಗಳಲ್ಲೂ ಅಳವಡಿಸಲಾಗುವುದು. ಉಚಿತವಾಗಿ ಈ ಸೇವೆ ನೀಡಲಾಗುತ್ತಿದ್ದು, ಅಧಿವೇವಶನದಲ್ಲಿ ಒಪ್ಪಿಗೆ ಸಿಕ್ಕರೆ ಇನ್ನು 3-4 ತಿಂಗಳಲ್ಲಿ ಕಾರ್ಯಕ್ರಮ ಶುರುವಾಗಲಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.