ಬೆಂಗಳೂರು: ಗುತ್ತಿಗೆಯಲ್ಲಿ ಶೇಕಡಾ 40ರಷ್ಟು ಅಕ್ರಮ ಆರೋಪದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಪೃಥ್ವಿ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಜುಲೈ 6, 2021ರಂದು ಪ್ರಧಾನಿಗೆ ಪತ್ರ ಬರೆದು, ಗುತ್ತಿಗೆ ಕಾಮಗಾರಿಗಳಲ್ಲಿನ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಹಾಗೂ ಜಲ ಸಂಪನ್ಮೂಲ ಇಲಾಖೆ, ಬೃಹತ್ ನೀರಾವರಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ಎಷ್ಟೆಷ್ಟು ಶೇಕಡಾವಾರು ಮೊತ್ತವು ಅಕ್ರಮವಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದೊಂದು ಗಂಭೀರ ಆರೋಪವಾಗಿದ್ದು, ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಅವಶ್ಯಕವಾಗಿದೆ ಎಂದರು.
ಅಕ್ರಮಕ್ಕೆ ಸಂಬಂಧಿಸಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೆವು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಳೆದ ಮೂರು ತಿಂಗಳ ಅವಧಿಯ ಗುತ್ತಿಗೆಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ಹಲವು ವರ್ಷಗಳಿಂದ ಗುತ್ತಿಗೆ ಕಾಮಗಾರಿಗಳಲ್ಲಿ ಅಕ್ರಮ ನಡೆಯುತ್ತಿರುವುದರಿಂದ ಕೇವಲ ತಮ್ಮ ಅಧಿಕಾರಾವಧಿಯಲ್ಲಿನ ಮೂರು ತಿಂಗಳಿನ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸುವುದು ಸರಿಯಲ್ಲ. ಅಲ್ಲದೇ, ಅಕ್ರಮದಲ್ಲಿ ಸರ್ಕಾರದ ಅಧಿಕಾರಿಗಳು ಹಾಗೂ ಶಾಸಕರು ಭಾಗಿಯಾದ ಆರೋಪವಿರುವುದರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ತನಿಖೆ ನಡೆಸುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಅವರು ಹೇಳಿದರು.
ಗುತ್ತಿಗೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದ್ದು, ತೆರಿಗೆದಾರರಿಗೆ ಅನ್ಯಾಯವಾಗುತ್ತಿದೆ. ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದರಿಂದ ತೆರಿಗೆದಾರರಲ್ಲೂ ವ್ಯವಸ್ಥೆಯ ಬಗ್ಗೆ ಭರವಸೆ ಮೂಡುತ್ತದೆ. ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅಕ್ರಮ ಆಸ್ತಿಯು ಸರ್ಕಾರದ ಬೊಕ್ಕಸವನ್ನು ಸೇರಿ ರಾಜ್ಯದ ಅಭಿವೃದ್ಧಿಗೆ ಬಳಕೆಯಾಗಬೇಕಿದೆ. ಆದ್ದರಿಂದ ತಾವುಗಳು ಕಳೆದ ಹತ್ತು ವರ್ಷಗಳಲ್ಲಿ ವಿವಿಧ ಪಕ್ಷಗಳ ಸರ್ಕಾರಗಳ ಅವಧಿಯಲ್ಲಿನ ಎಲ್ಲ ಗುತ್ತಿಗೆ ಕಾಮಗಾರಿಗಳ ಅಕ್ರಮ ಕುರಿತು ರಾಜ್ಯ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಮನವಿ ಪತ್ರದಲ್ಲಿ ಪೃಥ್ವಿ ರೆಡ್ಡಿ ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆಪ್ ಮುಖಂಡರಾದ ಮೋಹನ್ ದಾಸರಿ, ಬಿ.ಟಿ.ನಾಗಣ್ಣ, ಜಗದೀಶ್ ಚಂದ್ರ, ಸುರೇಶ್ ರಾಥೋಡ್, ಕುಶಲ ಸ್ವಾಮಿ, ವಿಜಯ್ ಶಾಸ್ತ್ರಿಮಠ್ ಇದ್ದರು.
ಇದನ್ನೂ ಓದಿ: ಕೆಐಎಡಿಬಿ ಜಮೀನು ಹಂಚಿಕೆ ನೀತಿ ತಿದ್ದುಪಡಿಗೆ ಮುಂದಾದ ಸರ್ಕಾರ: ಏನಿದು ಉದ್ದೇಶಿತ ಹೊಸ ನೀತಿ?