ಬೆಂಗಳೂರು : ತಾಯಿ ಜತೆ ಆತ್ಮೀಯತೆ ಹೊಂದಿದ್ದಲ್ಲದೆ, ತನ್ನೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ ಎಂಬ ಕಾರಣಕ್ಕೆ ಖಾಸಗಿ ಕಂಪನಿ ಉದ್ಯೋಗಿಯ ಹತ್ಯೆಗೆ ಬಾಲಕಿ ಹಾಗೂ ಆಕೆಯ ಪ್ರಿಯಕರನಿಂದ ಸುಪಾರಿ ಪಡೆದಿದ್ದ ರೌಡಿಶೀಟರ್‌ಗೆ ಸಂಜಯನಗರ ಪೊಲೀಸರು ಬೆಳ್ಳಂಬೆಳಗ್ಗೆ ಗುಂಡೇಟಿನ ರುಚಿ ತೋರಿಸಿದ್ದಾರೆ.
ಗುಡ್ಡೆನಹಳ್ಳಿ ನಿವಾಸಿ ಅವಿನಾಶ್ ಅಲಿಯಾಸ್ ಚಿನಾಲ್ ಅವಿ (22) ಗುಂಡೇಟು ತಿಂದ ರೌಡಿಶೀಟರ್. ಆರೋಪಿ ತನ್ನ ಇಬ್ಬರು ಸಹಚರರ ಜತೆ ಜುಲೈ 29ರಂದು ಇಸ್ರೋ ಕೇಂದ್ರದ ಸಮೀಪದಲ್ಲಿ ಖಾಸಗಿ ಕಂಪನಿ ಉದ್ಯೋಗಿ ಮುನಿರಾಜು ಎಂಬಾತನ ಹತ್ಯೆಗೆ ಯತ್ನಿಸಿದ್ದರು. ಈ ಕೃತ್ಯಕ್ಕೆ ಬಾಲಕಿ ಹಾಗೂ ಆಕೆಯ ಪ್ರಿಯಕರನಿಂದ ಸುಪಾರಿ ಪಡೆದುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅವಿನಾಶ್ ಸಂಜಯನಗರ ಠಾಣೆ ರೌಡಿಶೀಟರ್ ಆಗಿದ್ದು, ಇವನ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂದು ಕೊಲೆ, ಯಲಹಂಕ, ಹೆಬ್ಬಾಳ ಮತ್ತು ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಕೊಲೆ ಯತ್ನ ಸೇರಿ ಐದು ಪ್ರಕರಣ ದಾಖಲಾಗಿವೆ.
ಮುನಿರಾಜು ಕೊಲೆ ಯತ್ನ ಪ್ರಕರಣ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಆರೋಪಿ ಪತ್ತೆಗೆ ಮುಂದಾಗಿದ್ದರು. ಈ ವೇಳೆ ಅವಿನಾಶ್ ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ಸುಮಾರು 22 ದಿನಗಳಿಂದ ಆರೋಪಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಆರೋಪಿ ಬಲಗಾಲಿಗೆ ಗುಂಡು : ಪೊಲೀಸರ ತನಿಖೆ ವೇಳೆ ಆರೋಪಿ ಗುಡ್ಡೆನಹಳ್ಳಿ ಆಟದ ಮೈದಾನದ ಸಮೀಪ ಕೆಲ ದಿನಗಳಿಂದ ಓಡಾಡುತ್ತಿರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಇನ್ಸ್ ಪೆಕ್ಟರ್ ಜಿ. ಬಾಲರಾಜ್ ನೇತೃತ್ವದ ತಂಡ ಆರೋಪಿ ಬಂಧಿಸಲು ತೆರಳಿತ್ತು. ಪೊಲೀಸರನ್ನ ಕಂಡ ಆರೋಪಿ ತಪ್ಪಿಸಿಕೊಳ್ಳಲು ಮುಂದಾಗಿದ್ದ.
ಪೊಲೀಸ್ ಕಾನ್ಸ್ ಟೇಬಲ್ ಸಂತೋಷ್ ಆರೋಪಿ ಹಿಡಿಯಲು ಯತ್ನಿಸಿದಾಗ ಅವರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆಗ ಬಾಲರಾಜ್ ಆರೋಪಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.
ಆದರೂ ಆರೋಪಿ ಹಲ್ಲೆ ಮುಂದುವರಿಸಿದಾಗ ಆತ್ಮರಕ್ಷಣೆಗಾಗಿ ಆರೋಪಿ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ ಕಾನ್‌ಸ್ಟೇಬಲ್ ಸಂತೋಷ್‌ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರೇಮಿಗಳಿಂದ ಸುಪಾರಿ : ಹಲ್ಲೆಗೊಳಗಾದ ಮುನಿರಾಜು ಮತ್ತು ಹೆಬ್ಬಾಳದ ನಿವಾಸಿ ಬಾಲಕಿ ತಾಯಿ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮೀಯರಾಗಿದ್ದರು. ಹೀಗಾಗಿ, ಮನೆಗೆ ಬಂದು ಬಾಲಕಿಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಅದನ್ನು ಸಹಿಸಲಾರದೇ ಆಕೆ ತನ್ನ ಸ್ನೇಹಿತನಿಗೆ ಈ ವಿಚಾರ ತಿಳಿಸಿದ್ದಳು. ಆತ ಮುನಿರಾಜು ಮೇಲೆ ದಾಳಿಗೆ ರೌಡಿಶೀಟರ್ ಅವಿನಾಶ್‌ಗೆ ಸುಪಾರಿ ಕೊಟ್ಟಿದ್ದ.
ಈ ಮಧ್ಯೆ ಜುಲೈ 29ರಂದು ಮನೆಗೆ ಬಂದಿದ್ದ ಮುನಿರಾಜುಗೆ ವ್ಯಾಕ್ಸಿನೇಷನ್ ಹಾಕಿಸುವ ಬಗ್ಗೆ ಆಕೆಯ ತಾಯಿ ಹೇಳಿದ್ದಳು. ನಂತರ ಸಂತ್ರಸ್ತೆ ಹಾಗೂ ತಾಯಿಯನ್ನು ವ್ಯಾಕ್ಸಿನೇಷನ್‌ಗೆ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ ಬಾಲಕಿಯೇ ತನ್ನ ಪ್ರಿಯಕರನಿಗೆ ಲೋಕೇಷನ್ ಕಳುಹಿಸಿದ್ದಳು. ಬಳಿಕ ಅವಿನಾಶ್ ಮತ್ತು ತಂಡ ಸಂಜಯ್‌ನಗರ ಮುಖ್ಯ ರಸ್ತೆಯಲ್ಲಿ ಮುನಿರಾಜುನನ್ನು ಅಡ್ಡಗಟ್ಟಿ ಹಿಗ್ಗಾಮುಗ್ಗಾ ಥಳಿಸಿ ಪರಾರಿಯಾಗಿದ್ದರು.
ಈ ಪ್ರಕರಣದ ತನಿಖೆ ವೇಳೆ ಬಾಲಕಿಯೇ ತನ್ನ ಪ್ರಿಯಕರನ ಮೂಲಕ ಸುಪಾರಿ ಕೊಟ್ಟಿರುವುದು ಪತ್ತೆಯಾಗಿದೆ. ಒಂದೆರಡು ದಿನಗಳಲ್ಲಿ ಬಾಲಕಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು.