ಬೆಂಗಳೂರು: ಆರ್ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಾಂಶುಪಾಲರಾಗಿರುವ ಕೆ.ಎನ್.ಸುಬ್ರಹ್ಮಣ್ಯ ಯುಜಿಸಿ ನಿಯಮಾವಳಿ ಉಲ್ಲಂಘಿಸಿ ಕೊಯಮತ್ತೂರಿನ ಅವಿನಾಶಿಲಿಂಗಂ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಪಡೆದಿರುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಟ್ರೇಡ್ ಯೂನಿಯನ್ ಕೋ-ಆರ್ಡಿನೇಶನ್ ಸೆಂಟರ್ನ ಅಧ್ಯಕ್ಷರ ಜಿ.ಆರ್.ಶಿವಶಂಕರ್ ಆರೋಪಿಸಿದ್ದಾರೆ.
ಓದಿ: ಎತ್ತಿನಹೊಳೆ ಕಾಮಗಾರಿ ಪರಿಶೀಲನೆ ವೇಳೆ ಶಿವಲಿಂಗೇಗೌಡ-ಸತೀಶ್ ಜಾರಕಿಹೊಳಿ ಏಟು-ಎದಿರೇಟು
ಈ ಬಗ್ಗೆ ದಾಖಲೆ ಸಹಿತ ವಿವರ ನೀಡಿರುವ ಶಿವಶಂಕರ್, ಆರ್ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ಅವಿನಾಶಿಲಿಂಗಂ ಮಹಿಳಾ ವಿಶ್ವವಿದ್ಯಾಲಯ ಒಪ್ಪಂದ ಮಾಡಿಕೊಂಡು, ಪ್ರವೇಶ ಪರೀಕ್ಷೆಯನ್ನೂ ಬರೆಯದೆ ಮಹಿಳಾ ವಿವಿಯಲ್ಲಿ ಪುರುಷ ಪ್ರಾಧ್ಯಾಪಕರು ಪಿಹೆಚ್ಡಿ ಪದವಿ ಪಡೆದಿದ್ದಾರೆ. ಯಾವುದೇ ಅಧಿಕೃತ ಪತ್ರ ಕೊಡದೇ ವ್ಯಾಸಂಗ ಮಾಡಿರುವುದೂ ಕಾನೂನು ಬಾಹಿರ ಎಂದು ಆರೋಪ ಮಾಡಿದ್ದಾರೆ.
ಅಲ್ಲದೆ ಪೂರ್ಣಾವಧಿ ಪಿಎಚ್ಡಿ ವಿದ್ಯಾರ್ಥಿಯಾಗಿ ಯಾವುದೇ ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಬಾರದು ಎಂಬ ನಿಬಂಧನೆ ಇದೆ. ಆದರೆ ಕೆಎನ್ ಸುಬ್ರಹ್ಮಣ್ಯ ಕಾನೂನಿಗೆ ವಿರುದ್ಧವಾಗಿ, ಆರ್ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಬೋಧನೆ, ಪರೀಕ್ಷೆ ಮೌಲ್ಯಮಾಪನ ಹಾಗೂ ಪರೀಕ್ಷಾ ಸಂಚಾಲಕರಾಗಿ ಕೆಲಸ ಮಾಡಿದ್ದಾರೆ.
ಅಲ್ಲದೆ ಪಿಹೆಚ್ಡಿ ಪ್ರದಾನ ಮಾಡಲು ಅವಿನಾಶಿಲಿಂಗಂ ವಿವಿ ನಿಯಮ ಪ್ರಕಾರ ಕನಿಷ್ಠ ಮೂರು ವರ್ಷ ಆಗಿರಬೇಕು. ಆದರೆ ಸುಬ್ರಹ್ಮಣ್ಯ ಸಂಶೋಧನಾ ವಿದ್ಯಾರ್ಥಿಯಾಗಿ ಪ್ರವೇಶ ಪಡೆದ ಎರಡು ವರ್ಷ ಎಂಟು ತಿಂಗಳಲ್ಲಿ ಪಿಹೆಚ್ಡಿ ಪದವಿ ಪಡೆದಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಶಿಕ್ಷಣ ಸಚಿವರು, ಉನ್ನತಾಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ಪಡೆದಿರುವ ಪಿಹೆಚ್ಡಿ ಪದವಿ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ಶಿಸ್ತಿನ ಕ್ರಮ ಜರಗಿಸುವಂತೆ ಒತ್ತಾಯಿಸಿದರು. ಪಿಹೆಚ್ಡಿ ಸಂಬಂಧಿಸಿದಂತೆ ಪ್ರಮುಖ ದಾಖಲಾತಿಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಈ ಆರೋಪಕ್ಕೆ ಸಂಭಂದಪಟ್ಟಂತೆ ಈಟಿವಿ ಭಾರತದ ಜೊತೆ ಪ್ರಾಂಶುಪಾಲ ಸುಬ್ರಮಣ್ಯ ದೂರವಾಣಿಯಲ್ಲಿ ಸ್ಪಷ್ಟನೆ ನೀಡಿದ್ದು, ಪಿಹೆಚ್ಡಿ ಪಡೆದಿರುವುದರಲ್ಲಿ ಯಾವುದೇ ನಿಯಮವನ್ನು ಉಲ್ಲಂಘಿಸಲಾಗಿಲ್ಲ. ಆರ್ವಿ ಇಂಜಿನಿಯರಿಂಗ್ ಕಾಲೇಜಿನ ಜೊತೆ ಅವಿನಾಶಿಲಿಂಗಂ ವಿಷವಿದ್ಯಾನಿಲಯದ ಒಪ್ಪಂದದ ಪ್ರಕಾರವಾಗಿ ಪಿಹೆಚ್ಡಿ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ನಾನೊಬ್ಬನೇ ಅಲ್ಲ ಹಲವು ಪ್ರಾಧ್ಯಾಪಕರು ಪಿಹೆಚ್ಡಿ ಪಡೆದಿದ್ದು, ಇದೊಂದು ದುರುದ್ದೇಶದಿಂದ ಕೂಡಿದ ಆರೋಪ ಎಂದರು. ನಾವು ಈಗಾಗಲೇ ವಿಶ್ವವಿದ್ಯಾಲಯಕ್ಕೆ, ಉಜಿಸಿಗೆ ಸ್ಪಷ್ಟನೆ ನೀಡಿದ್ದು, ಯಾವುದೇ ಗೊಂದಲಕ್ಕೆ ಸಾರ್ವಜನಿಕರು, ವಿದ್ಯಾರ್ಥಿಗಳು ಒಳಗಾಗಬಾರದು ಎಂದರು.