ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಧರಣಿ ನಡೆಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಪಿ.ರಾಜೀವ್ ಅವರು, ಪರಿಶಿಷ್ಟ ಜಾತಿ, ಪಂಗಡಗಳಿಗೆ ಅಂತ ನಿರ್ದಿಷ್ಟ ಪ್ರಮಾಣದ ಹಣವನ್ನು ಒದಗಿಸಲಾಗಿದೆ. ಅದನ್ನು ಬೇರೆ ಉದ್ದೇಶಕ್ಕಾಗಿ ವರ್ಗಾವಣೆ ಮಾಡುವಂತಿಲ್ಲ. ವಿಪರ್ಯಾಸವೆಂದರೆ ಈ ಹಣವನ್ನು ಬೇರೆ ಉದ್ದೇಶಗಳಿಗಾಗಿ ವರ್ಗಾವಣೆ ಮಾಡಲಾಗುತ್ತಿದೆ. ಇದು ಕಾಯ್ದೆಯ ಪ್ರಕಾರ ತಪ್ಪು ಎಂದರು.
ಜೆಡಿಎಸ್ನ ಹೆಚ್.ಕೆ. ಕುಮಾರಸ್ವಾಮಿ ಮಾತನಾಡಿ, ಕಾಯ್ದೆ ಸ್ಪಷ್ಟವಾಗಿದ್ದರೂ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾದ ಹಣವನ್ನು ಯಾವ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗುತ್ತಿದೆ? ಈ ಬಗ್ಗೆ ಪದೇ-ಪದೇ ಹೇಳಿದರೂ ಪ್ರಯೋಜನವಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿಎಸ್ಪಿಯ ಶಾಸಕ ಎನ್. ಮಹೇಶ್ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾದ ಹಣವನ್ನು ಉದ್ದೇಶಕ್ಕಾಗಿ ಬಳಸದೆ ಅನ್ಯ ಉದ್ದೇಶಕ್ಕಾಗಿ ವರ್ಗಾವಣೆ ಮಾಡುವುದೂ ಪರಿಶಿಷ್ಟರ ಮೇಲಿನ ದೌರ್ಜನ್ಯವಾಗುತ್ತದೆ ಎಂದು ಎಚ್ಚರಿಸಿದರು.
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದರಾದರೂ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಇದನ್ನೊಪ್ಪದೆ ಸಭಾಧ್ಯಕ್ಷರ ಎದುರಿನ ಬಾವಿಗೆ ಬಂದು ಧರಣಿ ಆರಂಭಿಸಿದರು.
ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುತ್ತೇನೆ. ನೀವೆಲ್ಲ ಧರಣಿ ಹಿಂಪಡೆಯಿರಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಈ ರೀತಿ ಪರಿಶಿಷ್ಟರಿಗೆ ಮೀಸಲಾದ ಹಣವನ್ನು ವರ್ಗಾವಣೆ ಮಾಡುವುದು ತಪ್ಪು. ಒಂದು ಕಾಯ್ದೆ ಮಾಡಿ ಒದಗಿಸಿದ ಹಣ ನಿಗದಿತ ಉದ್ದೇಶಕ್ಕೆ ಬಳಕೆಯಾಗದೆ ಹೋದರೆ ಮುಂದಿನ ವರ್ಷಕ್ಕೆ ಅದನ್ನು ಬಳಸಬಹುದೇ, ಹೊರತು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ. ಪರಿಶಿಷ್ಟ ಜಾತಿಯ 17.06ರಷ್ಟು ಜನರಿದ್ದಾರೆ. ಪರಿಶಿಷ್ಟ ಪಂಗಡದ 6.01 ರಷ್ಟು ಜನರಿದ್ದಾರೆ. ಒಟ್ಟು 21 ಪರ್ಸೆಂಟ್ ಎರಡು ಸಮುದಾಯದವರಿದ್ದಾರೆ. ಡೀಮ್ಡ್ ಅನ್ನುವುದು ಮಿಸ್‌ಲೀಡ್ ಪದ. ಆ ಪದವನ್ನೇ ನಾವು ತೆಗೆಯೋಕೆ ಹೊರಟಿದ್ದೆವು. ನೀರಾವರಿಗೆ ಬಳಕೆಯಾಗುತ್ತೆ ಅಂತ ಅಧಿಕಾರಿಗಳು ಹೇಳಿದ್ದರು. ಹಾಗಾಗಿ ನಾವು ಬಿಟ್ಟಿದ್ದೆವು.
ಆದರೆ, ಆ ಪದವೇ ಮಾರಕವಾಗಿ ಬಿಟ್ಟಿದೆ. ಆ ಡೀಮ್ಡ್ ಎಂಬ ಪದವನ್ನು ತೆಗೆದುಹಾಕಬೇಕು ಎಂದು ಸಲಹೆ ನೀಡಿದರು.
ಎಸ್ಸಿಪಿ-ಟಿಎಸ್ಪಿ ಹಣ ದಲಿತರಿಗೇ ಖರ್ಚಾಗಬೇಕು. ಒಂದು ಪೈಸೆಯೂ ಬೇರೆಯದಕ್ಕೆ ಖರ್ಚಾಗಬಾರದು. ಸರ್ಕಾರ ಅದನ್ನು ಬೇರೆಯದಕ್ಕೆ ಬಳಸಬಾರದು. ಇದು ದಲಿತ ಸಮುದಾಯಕ್ಕೆ ಮಾರಕವಾದ ನಿರ್ಧಾರ. ಈ ವರ್ಷಕ್ಕೆ ಖರ್ಚಾಗದಿದ್ದರೆ, ಮುಂದಿನ ವರ್ಷ ಬಳಸಿಕೊಳ್ಳಬಹುದು. ಆದರೆ, ದಲಿತರಲ್ಲದೆ ಬೇರೆಯವರಿಗೆ ಖರ್ಚು ಮಾಡಬಾರದು. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು.
ತಾಂಡಾ ಅಭಿವೃದ್ಧಿ ನಿಗಮಕ್ಕೂ ಅನುದಾನವಿಲ್ಲ. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೂ ಅನುದಾನ ಕೊಟ್ಟಿಲ್ಲ. ದಲಿತರ ಹಣವನ್ನು ಯಾಕೆ ಬೇರೆಯದಕ್ಕೆ ಬಳಸುತ್ತೀರಾ, ದಲಿತರ ಯೋಜನೆಗಷ್ಟೇ ಉಪಯೋಗವಾಗಬೇಕು. ಬೇರೆಯದಕ್ಕೆ ಸರ್ಕಾರ ವಿನಿಯೋಗಿಸುವಂತಿಲ್ಲ ಎಂದು ಪಕ್ಷಬೇಧ ಮರೆತು ಶಾಸಕರಾದ ಪಿ.ರಾಜೀವ್, ಭೀಮಾನಾಯ್ಕ, ಕಂಪ್ಲಿ ಗಣೇಶ್, ಜೆಡಿಎದ್ನ ಅನ್ನದಾನಿ, ಬಿಎಸ್ಪಿಯ ಮಹೇಶ್ ಸೇರಿ ಎಲ್ಲರೂ ವಿರೋಧ ವ್ಯಕ್ತಪಡಿಸಿದರು.
ಓದಿ: ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಚರ್ಚೆಗೆ ಬಿಜೆಪಿ ಪಟ್ಟು : ಸದನದಲ್ಲಿ ಗದ್ದಲ
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಒಂದೇ ಸಮನೆ ಕೂಗಾಡತೊಡಗಿದ್ದರಿಂದ ಸಭಾಧ್ಯಕ್ಷರು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
ಉತ್ತರ ವಾಪಸ್ ಪಡೆದ ಸಚಿವರು : ಮತ್ತೆ ಸದನ ಸಮಾವೇಶಗೊಂಡಾಗ ಧರಣಿ ಮುಂದುವರೆಸಿದ ಸದಸ್ಯರು, ಎಸ್ಸಿಪಿ-ಟಿಎಸ್ಪಿ ಹಣ ಬಳಕೆ ವಿಚಾರಕ್ಕೆ ಸಚಿವ ಶ್ರೀರಾಮುಲು ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಸಚಿವರು ತಮ್ಮ ಉತ್ತರ ವಾಪಸ್ ಪಡೆಯಬೇಕು. ಈ ಹಣವನ್ನು ಯಾವುದಕ್ಕೂ ಬಳಸಿಕೊಳ್ಳುವಂತಿಲ್ಲ ಎಂದು ಪಟ್ಟುಹಿಡಿದರು. ಆಗ ಸಚಿವರು ನೀಡಿದ ಉತ್ತರವನ್ನು ವಾಪಸ್ ಪಡೆಯುವುದಾಗಿ ಹೇಳಿದರು. ನಂತರ ಧರಣಿ ನಿರತ ಸದಸ್ಯರು ತಮ್ಮ ಆಸನಗಳಿಗೆ ತೆರಳಿದರು.