ಬೆಂಗಳೂರು : ಅಂತೂ ಇಂತೂ ಅಳೆದು ತೂಗಿ ಬೊಮ್ಮಾಯಿ ಬಳಗಕ್ಕೆ ಖಾತೆ ಹಂಚಿಕೆಯಾಗಿದೆ. ಖಾತೆ ಹಂಚಿಕೆಯಲ್ಲಿ ಹೊಸ ಸಚಿವರಿಗೆ ಬಂಪರ್ ಖಾತೆಗಳನ್ನು ನೀಡಲಾಗಿದೆ. ಇದರ ಜೊತೆಗೆ ಹೈಕಮಾಂಡ್ ಕೂಡ ಖಾತೆ ಹಂಚಿಕೆಯಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ.
29 ಸಚಿವರಿಗೂ ಖಾತೆ ಹಂಚಿ ಆದೇಶ ಹೊರಡಿಸಲಾಗಿದೆ. ಖಾತೆ ಹಂಚಿಕೆಯಲ್ಲಿ ಕೆಲ ಅಚ್ಚರಿಯ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕೆಲವರಿಗೆ ಹಳೆಯ ಖಾತೆಯನ್ನೇ ಮುಂದುವರಿಸಲಾಗಿದ್ದರೆ, ಇನ್ನು ಕೆಲವರಿಗೆ ಹೊಸ ಖಾತೆಗಳನ್ನು ವಹಿಸಲಾಗಿದೆ.
ಖಾತೆ ಹಂಚಿಕೆ ವಿಚಾರದಲ್ಲಿ ದೊಡ್ಡ ಮಟ್ಟಿನ ಅಸಮಾಧಾನ ಇಲ್ಲವಾದರೂ ಒಂದಿಬ್ಬರು ತಮಗೆ ಸಿಕ್ಕ ಖಾತೆ ಬಗ್ಗೆ ಅತೃಪ್ತಿ ಹೊರ ಹಾಕಿದ್ದಾರೆ. ಉಳಿದಂತೆ ಬಹುತೇಕ ಸಚಿವರು ಸಿಕ್ಕ ಖಾತೆ ಬಗ್ಗೆ ಬಹಿರಂಗವಾಗಿ ಕ್ಯಾತೆ ತೆಗೆದಿಲ್ಲ. ಆದರೆ, ಬೊಮ್ಮಾಯಿ ಟೀಂನ ಹೊಸ ಸಚಿವರಿಗೆ ಬಂಪರ್ ಖಾತೆಗಳನ್ನು ನೀಡಲಾಗಿರುವುದು ಅಚ್ಚರಿ ಮೂಡಿಸಿದೆ.
ಹೊಸಬರಿಗೆ ಮಹತ್ವದ ಖಾತೆ : ಬೊಮ್ಮಾಯಿ ಸಂಪುಟದಲ್ಲಿ ಅನಿರೀಕ್ಷಿತ ಎಂಬಂತೆ ಹೊಸಬರಿಗೆ ಮಹತ್ವದ ಖಾತೆಗಳನ್ನು ನೀಡಲಾಗಿದೆ. ಸಂಘ ಪರಿವಾರದ ಹಿನ್ನೆಲೆಯುಳ್ಳ ಹೊಸ ಮುಖದ ಸಚಿವರಿಗೆ ಪ್ರಮುಖ, ಹೈಪ್ರೊಫೈಲ್ ಖಾತೆಗಳನ್ನು ನೀಡಿರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ.
ಬೊಮ್ಮಾಯಿ ಸಂಪುಟದ ಸದಸ್ಯ ಕಾರ್ಕಳ ಶಾಸಕ ಸುನಿಲ್ ಕುಮಾರ್ ಗೆ ಇಂಧನ ಖಾತೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಇಂಧನ ಖಾತೆಯನ್ನು ಅನುಭವಿ ಸಚಿವರಿಗೆ ನೀಡಲಾಗುತ್ತದೆ. ಹಿಂದಿನ ಸಂಪುಟದಲ್ಲಿ ಸಿಎಂ ಬಿಎಸ್ ವೈ ಅವರೇ ಇಂಧನ ಖಾತೆ ಇಟ್ಟುಕೊಂಡಿದ್ದರು. ಇಂಧನ ಖಾತೆ ಅತಿ ಹೆಚ್ಚು ಬೇಡಿಕೆ ಇರುವ ಖಾತೆಗಳಲ್ಲಿ ಒಂದು. ಅಂಥ ಪ್ರಮುಖ ಖಾತೆಯನ್ನು ಹೊಸಬರಾದ ಸುನಿಲ್ ಕುಮಾರ್ ಗೆ ನೀಡಿರುವುದು ಹಲವರ ಹುಬ್ಬೇರಿಸಿದೆ.
ಇನ್ನು ಹಿರಿಯ ಶಾಸಕ ಆದರೆ ಹೊಸಬರ ಸಾಲಿನಲ್ಲಿರುವ ಆರಗ ಜ್ಞಾನೇಂದ್ರರಿಗೆ ಸೂಕ್ಷ್ಮ ಹಾಗೂ ಅತಿ ಪ್ರಮುಖ ಗೃಹ ಖಾತೆ ನೀಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಮೂಲ ಬಿಜೆಪಿಗ ಹಾಗೂ ಸಂಘ ಪರಿವಾರದ ಹಿನ್ನೆಲೆಯುಳ್ಳವರಾದ ಆರಗ ಜ್ಞಾನೇಂದ್ರರಿಗೆ ಗೃಹ ಖಾತೆ ನೀಡಲಾಗಿದೆ. ಗೃಹ ಖಾತೆಯನ್ನು ಸಾಮಾನ್ಯವಾಗಿ ಅನುಭವಿ ಸಚಿವರಿಗೇ ನೀಡಲಾಗುತ್ತದೆ.
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಗುರುತರ ಹೊಣೆಗಾರಿಕೆ ಹೊಂದಿರುವ ಹೆಚ್ಚಿನ ಒತ್ತಡದಿಂದ ಕೂಡಿದ ಖಾತೆಯಾಗಿದೆ. ಸರ್ಕಾರದಲ್ಲಿ ಸಿಎಂ ಬಳಿಕದ ಸ್ಥಾನ ಎಂದೇ ಬಿಂಬಿತವಾಗಿರುವ ಖಾತೆ ಅದಾಗಿದೆ. ಅಂಥ ಮಹತ್ವದ ಖಾತೆಯನ್ನು ಆರಗ ಜ್ಞಾನೇಂದ್ರರಿಗೆ ನೀಡಿರುವುದು ಕುತೂಹಲ ಮೂಡಿಸಿದೆ.
ಮತ್ತೊಂದು ಅತಿ ಪ್ರಮುಖ ಖಾತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆಯನ್ನೂ ಹೊಸ ಮುಖದ ಸಚಿವ ಬಿ ಸಿ ನಾಗೇಶ್ ಅವರಿಗೆ ನೀಡಲಾಗಿದೆ. ಬಿ ಸಿ ನಾಗೇಶ್ ಕೂಡ ಆರ್ ಎಸ್ಎಸ್ ಹಿನ್ನೆಲೆ ಉಳ್ಳವರು. ಈ ಹಿನ್ನೆಲೆ ಅವರಿಗೂ ಮಹತ್ವದ ಖಾತೆ ನೀಡಲಾಗಿದೆ.
ಇತ್ತ ಹೊಸ ಸಚಿವ ಹಾಲಪ್ಪ ಆಚಾರ್ ಗೆ ಗಣಿ ಹಾಗೂ ಭೂ ವಿಜ್ಞಾನ ಖಾತೆ ನೀಡಿರುವುದು ಅಚ್ಚರಿ ಮೂಡಿಸಿದೆ. ಗಣಿ ಮತ್ತು ಭೂ ವಿಜ್ಞಾನ ಖಾತೆಯನ್ನೂ ಪ್ರಮುಖ ಸಚಿವರಿಗೇ ನೀಡಲಾಗುತ್ತದೆ. ಆದರೆ, ಬೊಮ್ಮಾಯಿ ಸಂಪುಟದಲ್ಲಿ ಹೊಸಬರಾದ ಹಾಲಪ್ಪ ಆಚಾರ್ ಗೆ ಈ ಮಹತ್ವದ ಖಾತೆ ನೀಡಲಾಗಿದೆ.
ಮೂಲ ಬಿಜೆಪಿಗರು ಹಾಗೂ ಸಂಘ ಪರಿವಾರದ ಹಿನ್ನೆಲೆಯುಳ್ಳವರಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಈ ನಿರ್ಧಾರದ ಹಿಂದೆ ಹೈಕಮಾಂಡ್ ಪಾಲು ಹೆಚ್ಚಾಗಿದೆ. ಅತಿ ಸೂಕ್ಷ್ಮ ಹಾಗೂ ಪ್ರಮುಖ ಖಾತೆಗಳನ್ನು ಪಕ್ಷದ ನಿಷ್ಠಾವಂತ ಹಾಗೂ ಮೂಲ ಬಿಜೆಪಿಯವರಿಗೆ ನೀಡುವ ಮೂಲಕ ಹೈಕಮಾಂಡ್ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಹೀಗಾಗಿ, ಖಾತೆ ಹಂಚಿಕೆಯಲ್ಲಿ ಆರ್ ಎಸ್ ಎಸ್ ಹಾಗೂ ಹೈಕಮಾಂಡ್ ನ ಜುಗಲ್ ಬಂದಿ ಹೆಚ್ಚಾಗಿ ಕಾಣುತ್ತಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.