ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ರಾಜರಾಜೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ಇವರ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಜೊತೆ ಕುಸುಮಾ ಹನುಮಂತರಾಯಪ್ಪ ಕ್ಷೇತ್ರದ ಎಲ್ಲೆಡೆ ಸುತ್ತಿ ಮನೆಮನೆಗೆ ತೆರಳಿ ಮತದಾರರ ಮನವೊಲಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದರ ಜೊತೆ ಜೊತೆಗೆ ಇಂದು ರಾಜರಾಜೇಶ್ವರಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದು, ಮಾತ್ರವಲ್ಲ ಉರುಳು ಸೇವೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ದೇಶದ ಒಳಿತಿಗಾಗಿ, ರಾಜ್ಯದ ಒಳಿತಿಗಾಗಿ, ರಾಜರಾಜೇಶ್ವರಿ ನಗರ ಕ್ಷೇತ್ರದ ಒಳಿತಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಉರುಳು ಸೇವೆ ಸಲ್ಲಿಸಿದ್ದೇನೆ. ದೇಶದಲ್ಲಿ ಕೊರೊನಾ ಹಾವಳಿ ನಿವಾರಣೆ ಆಗಲಿ ಮತ್ತು ದುಷ್ಟರನ್ನ ಶಿಕ್ಷಿಸಿ ಶಿಷ್ಟರನ್ನ ರಕ್ಷಿಸು ಎಂದು ದೇವತೆಯನ್ನು ಪ್ರಾರ್ಥಿಸಿದೆ" ಎಂದು ಹೇಳಿದ್ದಾರೆ.
ನವಂಬರ್ 3ರಂದು ಮತದಾನ ನಡೆಯುವ ರಾಜರಾಜೇಶ್ವರಿ ವಿಧಾನಸಭೆ ಉಪಚುನಾವಣೆ ಫಲಿತಾಂಶ ನವಂಬರ್ 10ರಂದು ಪ್ರಕಟವಾಗಲಿದೆ. ಇರುವ ಕಡಿಮೆ ಅವಧಿಯಲ್ಲಿಯೇ ಎಲ್ಲೆಡೆ ಸುತ್ತಿ ಪ್ರಚಾರ ನಡೆಸುತ್ತಿರುವ ಕುಸುಮಾ ಹನುಮಂತರಾಯಪ್ಪ ಒಂದಿಷ್ಟು ಬಿಡುವು ಮಾಡಿಕೊಂಡು ದೇಗುಲ ದರ್ಶನ ಕೂಡ ಮಾಡುತ್ತಿದ್ದಾರೆ.