ಬೆಂಗಳೂರು: ಕೊಲೆ ಯತ್ನ, ದರೋಡೆ ಹಾಗೂ ಹಲ್ಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಕಾಲಿಗೆ ಮೇಲೆ ಗುಂಡು ಹಾರಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ರೌಡಿಶೀಟರ್ ಹರೀಶ್ ಅಬ್ಬಿಗೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಅಡಗಿಕೊಂಡಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದೆ. ಪೀಣ್ಯ ಠಾಣೆಯ ಇನ್ಸ್ಸ್ಪೆಕ್ಟರ್ ಮುದ್ದುರಾಜ್ ತಂಡ ಆರೋಪಿಯನ್ನು ಬಂಧಿಸಲು ಮುಂದಾದಾಗ ಹರೀಶ್, ಕಾನ್ಸ್ಟೇಬಲ್ ರವಿ ಹಾಗೂ ಲಕ್ಷ್ಮೀನಾರಾಯಣ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ಸ್ಪೆಕ್ಟರ್ ಮುದ್ದುರಾಜ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದು ನಂತರ ಬಂಧಿಸಿದ್ದಾರೆ.
ರೌಡಿಶೀಟರ್ ಹರೀಶ್ ವಿರುದ್ಧ ನಂದಿನಿ ಲೇಔಟ್, ಪೀಣ್ಯ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 10ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ವಾರ ಪೀಣ್ಯ ಠಾಣೆ ವ್ಯಾಪ್ತಿಯ ಎಟಿಎಂವೊಂದರ ಬಳಿ ವ್ಯಕ್ತಿಯೊಬ್ಬರ ಮೇಲೆ ಹರೀಶ್ ಮತ್ತು ಆತನ ಗ್ಯಾಂಗ್ ಹಲ್ಲೆ ನಡೆಸಿದೆ. ಈ ಬಗೆಗಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೀಣ್ಯಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.