ಬೆಂಗಳೂರು: ದಾರಿ ಬಿಡುವ ವಿಚಾರಕ್ಕಾಗಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸರು ರೌಡಿಶೀಟರ್ ಓಪನ್ ಮಾಡಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಧೀರಜ್ ಹಾಗೂ ಮನೋಜ್ ಇದೀಗ ರೌಡಿಶೀಟರ್ಗಳಾಗಿದ್ದಾರೆ. ಇವರಿಬ್ಬರೂ ಸಹೋದರರಾಗಿದ್ದಾರೆ. ಮನೋಜ್ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಸಹೋದರ ಧೀರಜ್ ಫುಡ್ ಡೆಲಿವರಿ ಕಂಪನಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ರಸ್ತೆ ದಾಟುವಾಗ ಮಾಡಿಕೊಂಡ ಎಡವಟ್ಟು ಹಾಗೂ ಕೋಪದ ಕೈಗೆ ಬುದ್ದಿಕೊಟ್ಟು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ರೌಡಿಶೀಟರ್ ಲಿಸ್ಟ್ಗೆ ಸೇರಿದ್ದಾರೆ.
ಡಿ. 6ರಂದು ರಾತ್ರಿ 11 ಗಂಟೆ ಸುಮಾರಿಗೆ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿ ಚಿಕ್ಕಬೆಟ್ಟಹಳ್ಳಿ ಸರ್ಕಲ್ ಬಳಿ ಗಲಾಟೆ ನಡೆದಿದೆ. ಕಾರನ್ನು ರಸ್ತೆ ದಾಟಿಸುವಾಗ ಪೊಲೀಸರ ಜೊತೆ ನಡೆದ ಮಾತಿನ ಚಕಮಕಿ ಹಲ್ಲೆಗೆ ತಿರುಗಿತ್ತು. ಅಷ್ಟೇ ಅಲ್ಲ ಕೋಪದ ಕೈಗೆ ಬುದ್ದಿಕೊಟ್ಟು, ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಬೈದು ಉದ್ದಟತನ ಮೆರೆದಿದ್ದರು. ಸಾರ್ವಜನಿಕರು ಗಲಾಟೆ ಬಿಡಿಸಲು ಬಂದರೂ ಲೆಕ್ಕಿಸದೇ ಪೊಲೀಸರ ಮೇಲೆ ಕೈಮಾಡಿ ಇದೀಗ ಕಂಬಿ ಎಣಿಸುತ್ತಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ಮಾಡುವ ಸುದ್ದಿ ತಿಳಿದು ಗೃಹ ಆರಗ ಜ್ಞಾನೇಂದ್ರ ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು.
(ಇದನ್ನೂ ಓದಿ: ಯುವಕರ ಗೂಂಡಾಗಿರಿ.. ಪೊಲೀಸರ ಮೇಲೆ ಹಲ್ಲೆ.. ವಿಡಿಯೋದಲ್ಲಿ ಕೃತ್ಯ ಸೆರೆ)