ನೆಲಮಂಗಲ (ಬೆಂಗಳೂರು): ಎಪಿಎಂಸಿ ಮಾರುಕಟ್ಟೆಗೆ ಒಡವೆ ಧರಿಸಿ ಬರುತ್ತಿದ್ದ ರೈತರು ಮತ್ತು ವರ್ತಕರನ್ನೇ ಟಾರ್ಗೆಟ್ ಮಾಡಿ, ಮಾರಕಾಸ್ತ್ರ ತೋರಿಸಿ ಹೆದರಿಸಿ ಹಣ ಮತ್ತು ಒಡವೆ ದೋಚುತ್ತಿದ್ದ ಮೂವರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜಾನ್ಸನ್, ರಾಜ, ಸತ್ಯವೇಲು ಬಂಧಿತ ಆರೋಪಿಗಳು.
ನೆಲಮಂಗಲ ಮತ್ತು ಸುತ್ತಮುತ್ತಲಿನ ಎಪಿಎಂಸಿ ಮಾರುಕಟ್ಟೆಗಳಲ್ಲಿ ರೈತರು ಮತ್ತು ವರ್ತಕರನ್ನು ಟಾರ್ಗೆಟ್ ಮಾಡಿಕೊಂಡು ಹಣ ದೋಚುತ್ತಿದ್ದ ಗ್ಯಾಂಗ್ ಜನರ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ದೂರು ಸಹ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ಮಾದನಾಯಕನಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಆಟೋ, ದೊಣ್ಣೆ, ಮಚ್ಚು, ಚಾಕು ಖಾರದಪುಡಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ.. ಕಾರಿನ ಮೇಲೆ ಕಲ್ಲು ಎಸೆತ: ಸಿಸಿಟಿವಿಯಲ್ಲಿ ಕೃತ್ಯ ಸೆರೆ
ಮಧ್ಯರಾತ್ರಿ 1 ರಿಂದ 3 ಗಂಟೆಯೊಳಗೆ ಕೃತ್ಯ ಎಸಗಿ ಎಸ್ಕೇಪ್ ಆಗುತ್ತಿದ್ದ ಖರ್ತನಾಕ್ ಗ್ಯಾಂಗ್ ಅನ್ನು ಖಚಿತ ಸುಳಿವಿನ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ನೆಲಮಂಗಲ ಬಳಿಯ ಪಿಳ್ಳಳ್ಳಿ ಎಪಿಎಂಸಿ ಮಾರ್ಕೆಟ್ನಲ್ಲಿ ಅರೆಸ್ಟ್ ಮಾಡಿದ್ದಾರೆ. ಪಿಳ್ಳಳ್ಳಿ ಮಾರ್ಕೆಟ್ನಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆಯೇ ಈ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.