ಬೆಂಗಳೂರು: ರಾಜಧಾನಿಯಲ್ಲಿ ದರೋಡೆ ಮಾಡಿ ಪ್ರಾಯಶ್ಚಿತ್ತಕ್ಕಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಇಬ್ಬರು ಬಾಲಾಪರಾಧಿಗಳು ಸೇರಿ ನಾಲ್ವರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಶ್ರೀಧರ್ (29) ಹಾಗೂ ನಿತಿನ್ ರಾಜ್ (18) ಬಂಧಿತರು. ಇನ್ನಿಬ್ಬರು ಬಾಲಪರಾಧಿಗಳನ್ನು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ.
ಆರೋಪಿ ಶ್ರೀಧರ್ ಪದವೀಧರನಾಗಿದ್ದು, ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿದ್ದ. ಮೈ ತುಂಬಾ ಸಾಲ ಮಾಡಿಕೊಂಡಿದ್ದ ಈತ ಸಾಲಗಾರರ ಕಾಟಕ್ಕೆ ಬೇಸತ್ತು ಮನೆ ತೊರೆದು ಹಲವೆಡೆ ಠಿಕಾಣಿ ಹೂಡಿದ್ದ. ಪುಂಡರ ಜೊತೆ ಸೇರಿ ಗಾಂಜಾ ಚಟವನ್ನೂ ಅಂಟಿಸಿಕೊಂಡಿದ್ದ.
ಜೂ.2 ರಂದು ಲೋಕೇಶ್ ಎಂಬಾತ ಗಿರಿನಗರದ ಬ್ಯಾಂಕ್ ಕಾಲೋನಿಯ ಬಾರ್ನಲ್ಲಿ ಕುಡಿದು ಮನೆಗೆ ಹೋಗುವಾಗ ಆರೋಪಿಗಳಾದ ಶ್ರೀಧರ್, ನಿತಿನ್ ರಾಜ್ ಸೇರಿ ಮೂವರು ಬೈಕ್ನಲ್ಲಿ ಬಂದು ಅಡ್ಡಗಟ್ಟಿ ಲಾಂಗ್ನಿಂದ ಹಲ್ಲೆ ಮಾಡಿದ್ದಾರೆ. ಬಳಿಕ 50 ಸಾವಿರ ಮೌಲ್ಯದ ಎರಡು ಚಿನ್ನದ ಉಂಗುರ, 1.40 ಲಕ್ಷ ಮೌಲ್ಯದ 28 ಗ್ರಾಂ ಚಿನ್ನದ ಸರ ಹಾಗೂ ಪರ್ಸ್ನಲ್ಲಿದ್ದ 20 ಸಾವಿರ ನಗದು ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದರು.
ಕೃತ್ಯವೆಸಗಿದ ಬಳಿಕ ಗೋವಾಕ್ಕೆ ತರಳಿ ಮೋಜು-ಮಸ್ತಿ ಮಾಡಿದ್ದಾರೆ. ನಂತರ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮಲೆಮಹದೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಕಳ್ಳತನದ ಬಳಿಕ ಬೈಕ್ನಲ್ಲಿ ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೇ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಗಿರಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮೇಘಾಲಯ ಬಿಜೆಪಿ ಉಪಾಧ್ಯಕ್ಷನ 'ವೇಶ್ಯಾಗೃಹ'ದ ಮೇಲೆ ದಾಳಿ: 5 ಮಕ್ಕಳ ರಕ್ಷಣೆ, 73 ಮಂದಿ ಬಂಧನ