ಬೆಂಗಳೂರು: ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ರಾಜಾಹುಲಿ, ಬೇರೆ ಹುಲಿಗಳಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬಿಜೆಪಿ ನಗರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಸಾಕಷ್ಟು ಹುಲಿಗಳು ಮುಖ್ಯಮಂತ್ರಿ ಸ್ಥಾನಕ್ಕೆ ಕರ್ಚೀಪ್ ಹಾಕಿ ಕುಳಿತಿವೆ. ಎರಡು ಉಪ ಚುನಾವಣಾ ಕ್ಷೇತ್ರಗಳನ್ನು ಗೆದ್ದು, ನಾವು ನಮ್ಮ ನಾಯಕ ಯಡಿಯೂರಪ್ಪ ಅವರಿಗೆ ಗೆಲುವಿನ ಕಾಣಿಕೆ ಕೊಡಲಿದ್ದೇವೆ ಎಂದರು.
ಆರ್.ಆರ್. ನಗರ ಕುರುಕ್ಷೇತ್ರದಲ್ಲಿ ಚುನಾವಣೆಗೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದ್ದು, ಪ್ರೊಟೆಸ್ಟ್ ರಾಜಕಾರಣ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಶಸ್ತ್ರ ತ್ಯಾಗ ಮಾಡಿ ಚುನಾವಣಾ ರಂಗದಿಂದ ಪಲಾಯನ ಮಾಡಿದ್ದಾರೆ. ಸಿದ್ದರಾಮಯ್ಯ ಪದೇ ಪದೆ ಬಿಜೆಪಿಯವರಿಗೆ ಧಮ್ ಇದೆಯಾ ಎಂದು ಪ್ರಶ್ನಿಸುತ್ತಿದ್ದಾರೆ. ಇಡೀ ದೇಶದಲ್ಲಿ ಬಿಜೆಪಿ ತನ್ನ ಸಾಮರ್ಥ್ಯ ಏನು ಎಂದು ತೋರಿಸಿದೆ. ನಿಮಗೆ ಧಮ್ ಇದ್ದರೆ ನಿಮ್ಮ ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷರನ್ನು ಬದಲಾವಣೆ ಮಾಡಿ. ಪರ್ಮನೆಂಟ್ ಅಧ್ಯಕ್ಷರ ನೇಮಕ ಮಾಡಿ ಎಂದು ಸವಾಲೆಸೆದರು.
ವ್ಯಾಟಿಕನ್ ಸಿಟಿಯಲ್ಲಿ ಬಾಲಗಂಗಾಧರನಾಥ ಶ್ರೀ ಪ್ರತಿಮೆ ಮಾಡಲು ಸಾಧ್ಯವಾ?ಡಿ.ಕೆ.ಶಿವಕುಮಾರ್ ಈಗ ಜಾತಿ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ತಮ್ಮನ್ನು ಒಕ್ಕಲಿಗ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಆದರೆ ಭೈರವೇಶ್ವರ ಬೆಟ್ಟವನ್ನು ವ್ಯಾಟಿಕನ್ ಸಿಟಿ ಮಾಡಲು ಹೊರಟಿದ್ದಿರಲ್ಲಾ?, ಹಾಗಾದರೆ ವ್ಯಾಟಿಕನ್ ಸಿಟಿಯಲ್ಲಿ ನೂರು ಅಡಿ ಬೇಡ ಮೂರು ಅಡಿ ಎತ್ತರದ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರತಿಮೆ ಸ್ಥಾಪನೆ ಮಾಡಿ. ಕಪಾಲಿ ಬೆಟ್ಟವನ್ನು ಏಸು ಬೆಟ್ಟ ಮಾಡಲು ಹೊರಟಿದ್ದೀರಲ್ಲ. ಯಾವುದಾದರೂ ಪ್ರದೇಶದಲ್ಲಿ ನೀವು ಕಾಲಭೈರವೇಶ್ವರ ಸ್ವಾಮಿಯ ಒಂದು ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೀರಾ ತೋರಿಸಿ. ಹೋಗಲಿ ಅದು ಕಪಾಲಿ ಬೆಟ್ಟವೋ, ಏಸು ಬೆಟ್ಟವೋ ಸ್ಪಷ್ಟವಾಗಿ ಹೇಳಿಬಿಡಿ ಎಂದು ಡಿಕೆಶಿಗೆ ಸವಾಲು ಹಾಕಿದರು.
ಮ್ಯಾಚ್ ಫಿಕ್ಸಿಂಗ್: ಶಿರಾದಲ್ಲಿ ಕಾಂಗ್ರೆಸ್ ಸೋಲಬೇಕು ಎಂದು ಡಿ.ಕೆ.ಶಿವಕುಮಾರ್, ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಸೋಲಬೇಕು ಎಂದು ಸಿದ್ದರಾಮಯ್ಯ ಒಳತಂತ್ರ ಮಾಡಿದ್ದಾರೆ. ಇದು ಮ್ಯಾಚ್ ಫಿಕ್ಸಿಂಗ್ ಆಗಿದೆ. ಅದಕ್ಕಾಗಿಯೇ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಅಂತ ಕುಮಾರಸ್ವಾಮಿ ಪದೇ ಪದೆ ಹೇಳುತ್ತಿದ್ದರೂ ಡಿ.ಕೆ.ಶಿವಕುಮಾರ್ ಅದನ್ನು ನಿರಾಕರಿಸಲು ಹೋಗಿಲ್ಲ ಎಂದರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಈ ಉಪ ಚುನಾವಣೆ ಸೋತ ಮೇಲೆ ದೇವರೇ ದಿಕ್ಕು ಎನ್ನುವಂತಾಗಲಿದೆ. ಈ ಉಪ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಈಗಾಗಲೇ ಭರ್ಜರಿ ರೋಡ್ ಶೋ ಆಗಿದೆ. ಎರಡೂ ಕ್ಷೇತ್ರದಲ್ಲೂ ಬಿಜೆಪಿ ಪ್ರಚಂಡವಾಗಿ ಗೆದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡೂ ವಿಧಾನಸಭಾ ಕ್ಷೇತ್ರಗಳ ಗೆಲುವಿನ ಕಾಣಿಕೆ ನೀಡಲಿದ್ದೇವೆ ಎಂದರು.
ವೈಯಕ್ತಿಕ ನಿಂದನೆ ಬಿಡಿ: ತಾಯಿಯನ್ನೇ ಮಾರಿಕೊಂಡ ಅಭ್ಯರ್ಥಿ ಎಂದು ನಮ್ಮ ಮುನಿರತ್ನ ತಾಯಿ ಬಗ್ಗೆ ಮಾತನಾಡಿದ್ದಾರೆ. ಇದು ಒಳ್ಳೆಯದಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕಾಡು ಮನುಷ್ಯ ಎಂದಿರುವುದು ಸರಿಯಲ್ಲ. ಅವರ ಪದ ಬಳಕೆ ಸರಿಯಿಲ್ಲ. ಎಲ್ಲಿಂದಲೋ ಜನರನ್ನು ಕರೆದುಕೊಂಡು ಬಂದು ಪ್ರಚಾರ ಮಾಡುವ ಬದಲು ಸ್ಥಳೀಯ ಕಾರ್ಯಕರ್ತರನ್ನು ಕರೆತಂದು ಪ್ರಚಾರ ಮಾಡಿದರೆ ಇಂತಹ ಸಮಸ್ಯೆ ಆಗಲ್ಲ. ಶಾಂತಿಯುತ ಪ್ರಚಾರ ನಡೆಯಬೇಕು. ಗಲಭೆಗಳಿಗೆ ನಾವು ಅವಕಾಶ ನೀಡಲ್ಲ. ಕಾಂಗ್ರೆಸ್ ಕೂಡ ಇಂತಹ ಪದ ಬಳಕೆ ಬಿಟ್ಟರೆ ಶಾಂತ ರೀತಿಯ ಚುನಾವಣೆ ನಡೆಯಲಿದೆ. ಶಾಂತಿಯುತ ಮತದಾನ ಆಗುವ ನಿಟ್ಟಿನಲ್ಲಿ ಆಯೋಗ ಕ್ರಮ ಕೈಗೊಂಡಿದ್ದು, ನಾವೆಲ್ಲಾ ಶಾಂತಿಯುತ ಮತದಾನಕ್ಕೆ ಮನವಿ ಮಾಡಿದ್ದೇವೆ. ಕಾಂಗ್ರೆಸ್ ಕೂಡ ಪ್ರಚೋದನಕಾರಿ ಪದ ಬಳಕೆ, ವೈಯಕ್ತಿಕ ನಿಂದನೆ, ವ್ಯಕ್ತಿಗತ ಆರೋಪ ಬಿಟ್ಟು ಶಾಂತಿಯುತ ಚುನಾವಣೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಪ್ರೊಟೆಸ್ಟ್ ಪಾಲಿಟಿಕ್ಸ್: ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿ ಪರ ಮತ ಕೇಳಲು ಆಗುತ್ತಿಲ್ಲ. ಸರ್ಕಾರದ ಸಾಧನೆ, ಸರ್ಕಾರದ ತಪ್ಪು ಎತ್ತಿ ತೋರಿಸಲು ಒಂದೇ ಒಂದು ಸಾಲು ಸಿಗುತ್ತಿಲ್ಲ. ಹಾಗಾಗಿ ಪ್ರತಿಭಟನೆಯ ಎಲೆಕ್ಷನ್ ಮಾಡುತ್ತಿದ್ದಾರೆ. ಪ್ರೊಟೆಸ್ಟ್ ಮಾಡಿ ಚುನಾವಣೆ ಮಾಡುವ ಹೊಸ ಸ್ಟೈಲ್ ಕಂಡುಕೊಂಡಿದ್ದಾರೆ ಎಂದು ಟೀಕಿಸಿದರು.ವಾರ್ಡ್ಗಳಲ್ಲಿ ಮನೆ ಮನೆಗೆ ಹೋಗಲು ಕಾಂಗ್ರೆಸ್ನವರಿಗೆ ಕಾರ್ಯಕರ್ತರಿಲ್ಲ. ಬೂತ್ಗಳಲ್ಲಿ ಬೂತ್ ಏಜೆಂಟರಿಲ್ಲ. ಹಾಗಾಗಿ ಹೊರಗಿನಿಂದ ಜನರನ್ನು ಕರೆತಂದಿದ್ದಾರೆ. ನಮ್ಮಲ್ಲಿ ಯಡಿಯೂರಪ್ಪ ಒಬ್ಬರೇ ರಾಜಾಹುಲಿ. ಬೇರೆ ಹುಲಿ ಇಲ್ಲ. ಅವರಲ್ಲಿ ನಾನೇ ಹುಲಿ, ನಾನೇ ಹುಲಿ ಅಂತಾ ಬಹಳ ಜನ ರೆಡಿ ಆಗಿದ್ದಾರೆ. ಆದರೆ ನಮ್ಮಲ್ಲಿ ಯಡಿಯೂರಪ್ಪ ನಮ್ಮ ನಾಯಕ ಎಂದು ಚುನಾವಣೆ ನಂತರ ಬಿಜೆಪಿಯಲ್ಲೂ ಬದಲಾವಣೆ ಆಗುವ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಬಿಜೆಪಿ ವರ್ಸಸ್ ಜೆಡಿಎಸ್ ಆದರೂ ಅಚ್ಚರಿ ಇಲ್ಲ: ಕಾಂಗ್ರೆಸ್ ಸೋಲಿನ ಭಯದಿಂದ ಅಪಪ್ರಚಾರ ಮಾಡುತ್ತಿದೆ. ಆದರೆ ದೊಡ್ಡ ಅಂತರದ ಗೆಲುವನ್ನು ನಾವು ಸಾಧಿಸಲಿದ್ದೇವೆ. ಶಿರಾದಲ್ಲಿ ಬಿಜೆಪಿ ವರ್ಸಸ್ ಜೆಡಿಎಸ್ ಇದೆ. ನಿನ್ನೆಯಿಂದ ಕುಮಾರಸ್ವಾಮಿ ಹಾಗೂ ನಿಖಿಲ್ ಆರ್.ಆರ್. ನಗರಕ್ಕೆ ಬಂದಿದ್ದಾರೆ. ಆರ್.ಆರ್. ನಗರದಲ್ಲಿಯೂ ಬಿಜೆಪಿ ವರ್ಸಸ್ ಜೆಡಿಎಸ್ ನಡುವೆ ಫೈಟ್ ಆಗುವ ವಾತಾವರಣ ಕಾಣುತ್ತಿದೆ. ಮುಂದಿನ ದಿನದಲ್ಲಿ ನೇರ ಫೈಟ್ ಬಿದ್ದರೂ ಆಶ್ಚರ್ಯವಿಲ್ಲ ಎಂದರು.