ಬೆಂಗಳೂರು: ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದ ಸುರೇಶ್ ಎಂಬುವವರನ್ನು ಹಾಡ ಹಗಲೇ ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿರುವ ಹಂತಕರು ಪರಾರಿಯಾಗಿದ್ದಾರೆ. ಈ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೊಮ್ಮಲೂರಿನ ಗೌತಮ್ ನಗರದಲ್ಲಿ ಸುರೇಶ್ ವಾಸವಾಗಿದ್ದರು.
ಮಧ್ಯಾಹ್ನ ಮನೆಯಲ್ಲಿರುವಾಗ ಆರೋಪಿಗಳು ಮನೆ ಹಿಂಬಾಗಿಲಿನಿಂದ ನುಗ್ಗಿದ್ದಾರೆ. ಬಳಿಕ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಖಾರದಪುಡಿ ಎರಚಿ ಸುಳಿವು ಸಿಗದ ಹಾಗೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆಸ್ತಿ ವಿಚಾರಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಸಪ್ತಪದಿ ಯೋಜನೆ ಮರುಚಾಲನೆಗೆ ಆದೇಶ ನೀಡಿದ ಸಚಿವೆ ಶಶಿಕಲಾ ಜೊಲ್ಲೆ
ಸುರೇಶ್ ಸಹೋದರ ಹಾಗೂ ಸಹೋದರಿಯರು ಮನೆ ಬಳಿ ಬಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರು. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಗೆ ದೂರು ಕೂಡಾ ನೀಡಲಾಗಿತ್ತು. ಸುರೇಶ್ ತಾಯಿ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಅವರ ಹೆಸರಿನಲ್ಲಿ ಆಸ್ತಿಯಿದೆ. ಇದು ಎಲ್ಲರಿಗೂ ಸೇರಿದ್ದಾಗಿ ಗಲಾಟೆ ಆಗುತ್ತಿತ್ತು ಎಂದು ಮೃತರ ಸಂಬಂಧಿಕರಾದ ಕವಿತಾ ತಿಳಿಸಿದರು.