ಬೆಂಗಳೂರು: ಅಪ್ರಾಪ್ತರು ಬಾರ್, ಪಬ್ ಹಾಗೂ ಮದ್ಯದಂಗಡಿಗಳಿಗೆ ಹೋಗುವುದಕ್ಕೆ ನಿಷೇಧಿಸಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ನಿಗದಿತ ಸಮಯದಲ್ಲಿ ಬಂದ್ ಮಾಡುವ ಜೊತೆಗೆ ಕೆಲವು ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಮದ್ಯದಂಗಡಿಳಿಗೆ ಸೂಚನೆ ನೀಡಿದ್ದಾರೆ.
ಬಾರ್, ಪಬ್, ಮದ್ಯದಂಗಡಿಗಳಿಗೆ ಅಪ್ರಾಪ್ತ ವಯಸ್ಕರು ಪ್ರವೇಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು, ಮಾದಕ ದ್ರವ್ಯ ಸಾಗಣೆ ಮತ್ತು ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸಬೇಕು. ಬಾರ್, ಪಬ್, ಮದ್ಯದಂಗಡಿಗಳ ಲೈಸನ್ಸ್‌ಗಳಲ್ಲಿ ನಿಗದಿಪಡಿಸಿದ ಸಮಯದಂತೆ ಕಡ್ಡಾಯವಾಗಿ ಅಂಗಡಿಗಳನ್ನು ಮುಚ್ಚಿಸಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಪಬ್‌ಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ರಾತ್ರಿ 10 ಗಂಟೆಯೊಳಗಾಗಿ ನಿಲ್ಲಿಸಿ ಶಬ್ದ ಮಾಲಿನ್ಯ ಉಂಟಾಗದಂತೆ ಕ್ರಮ ಜರುಗಿಸಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೊರತು ಪಡಿಸಿ ಉಳಿದ ಎಲ್ಲ ನಗರದ ಆಯುಕ್ತರಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದು. ಜುಲೈ 31ರೊಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
(ಇದನ್ನೂ ಓದಿ: ದಯವಿಲ್ಲದ ಧರ್ಮವಾವುದಯ್ಯ, ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ.. ಅಲೋಕ್ ಕುಮಾರ್ ವಚನ ಪಾಠ)