ಬೆಂಗಳೂರು: ನಿತ್ಯ ಯಾವುದೇ ಅಡ್ಡಿ ಆತಂಕವಿಲ್ಲದೇ ಲಕ್ಷಾಂತರ ಪ್ರಯಾಣಿಕರನ್ನ ಹೊತ್ತೊಯ್ಯುತ್ತಿದ್ದ ಕೆಎಸ್ಆರ್ಟಿಸಿ ನಿಗಮಕ್ಕೆ ಕೊರೊನಾ ಪ್ರೇರಿತ ಲಾಕ್ಡೌನ್ ಬ್ರೇಕ್ ಹಾಕಿತ್ತು. ಹೀಗಾಗಿ ಅಂತಾರಾಜ್ಯ ಹಾಗೂ ಅಂತರ್ಜಿಲ್ಲೆ ಸಂಚಾರವನ್ನು ನಿರ್ಬಂಧ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಬಸ್ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧ ತೆರವು ಮಾಡಿದ ಹಿನ್ನೆಲೆ ಇದೀಗ ಅಂತಾರಾಜ್ಯ ಸಾರಿಗೆ ಸೇವೆ ಪುನಾರಂಭವಾಗಿದೆ.
ರಾಜ್ಯದಿಂದ ನೆರೆಯ 6 ರಾಜ್ಯಗಳಾದ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗೋವಾ, ತೆಲಂಗಾಣ ಮತ್ತು ಪಾಂಡಿಚೇರಿಗೆ ಸುಮಾರು 1,070 ಕೆಎಸ್ಆರ್ಟಿಸಿ ಬಸ್ಗಳು ಅಕ್ಟೋಬರ್ನಿಂದ ಕಾರ್ಯಾಚರಣೆ ನಡೆಸಲಿವೆ. ತಮಿಳುನಾಡಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಕಾರಣ ರೆಡ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ, ಅಲ್ಲಿನ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿರುವ ನಿಗಮದ ಅಧಿಕಾರಿಗಳು ಸಾಕಷ್ಟು ಸಲ ಪತ್ರದ ಮೂಲಕ ಮಾತುಕತೆ ನಡೆಸಿದ್ದಾರೆ.
ಈಗಾಗಲೇ ಸರ್ಕಾರದಿಂದ ನೀಡಿದ ನಿರ್ದೇಶನಗಳನ್ವಯ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್, ಧರಿಸಬೇಕು. ಮುಂಗಡ ಆಸನಗಳನ್ನು ಸಂಸ್ಥೆಯ ವೆಬ್ಸೈಟ್ www.ksrtc.in ಮತ್ತು ಫ್ರಾಂಚೈಸಿ ಕೌಂಟರ್ಗಳ ಮುಖಾಂತರ ಕಾಯ್ದಿರಿಸಿಕೊಳ್ಳುವಂತೆ ಹುಬ್ಬಳ್ಳಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮನವಿ ಮಾಡಿದ್ದು, ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್ ಸೌಲಭ್ಯ ನೀಡಲು ಚಿಂತನೆ ನಡೆಸಿದೆ. ಲಾಕ್ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿದಿನ ಪಣಜಿಗೆ 1, ರಾಜಹಂಸ ಮತ್ತು 8 ವೇಗಧೂತ ಸೇರಿ 9, ವಾಸ್ಕೋಗೆ 1 ಮತ್ತು ಮಡಗಾಂವ್ಗೆ 1 ಒಟ್ಟು 11 ಬಸ್ಗಳು ಗೋವಾಕ್ಕೆ ಸಂಚರಿಸುತ್ತಿದ್ದವು.
ಮೇ ತಿಂಗಳಲ್ಲೇ ಆಂಧ್ರಪ್ರದೇಶಕ್ಕೆ ಓಡಾಟ ಶುರುವಾಗಿರುವುದರಿಂದ ಪ್ರಯಾಣಿಕರ ಸಂಖ್ಯೆ ಪ್ರತಿದಿನ 15 ಸಾವಿರದ ಆಸುಪಾಸಿನಷ್ಟು ಇದೆ. 200 ರಿಂದ 250 ಬಸ್ಗಳು ಓಡಾಡುತ್ತಿವೆ. ಮಹಾರಾಷ್ಟ್ರದಲ್ಲಿ ಹಲವು ಭಾಗದಲ್ಲಿ ಲಾಕ್ಡೌನ್ ಮುಂದುವರೆದಿದ್ದು, ಜನರ ಓಡಾಟ ಕಡಿಮೆ. ಹಾಗೇ ಕೇರಳದಲ್ಲೂ ಜನರ ಸಾಕಷ್ಟು ನಿರ್ಬಂಧಗಳಿಂದು ಪ್ರಯಾಣಿಕರು ಇಲ್ಲಿಂದ ಹೋದರೆ 14 ದಿನ ಕ್ವಾರೆಂಟೈನ್ ಮಾಡಲಾಗುತ್ತಿತ್ತು. ಆದರೆ ಇದೀಗ ಅದನ್ನು 7 ದಿನಕ್ಕೆ ಸಡಿಲಿಸಲಾಗಿದೆ.
ಗೋವಾದಲ್ಲೂ ಸಹ ಹೀಗೇ ಇದ್ದು, ಬಸ್ ಓಡಾಟ ಹಾಗೂ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇದೆ. ಇನ್ನು ತೆಲಂಗಾಣಕ್ಕೆ ಬಸ್ಸುಗಳ ಓಡಾಟ ಶುರುವಾಗಿದೆ. ಪ್ರಯಾಣಿಕರನ್ನು ಸೆಳೆಯಲು ಆಕರ್ಷಕ ಆಫರ್ಗಳನ್ನು ನೀಡುವ ಕೆಲಸಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. ಒಟ್ಟಿನಲ್ಲಿ ಲಾಕ್ಡೌನ್ ನಂತರ ಸ್ಥಗಿತವಾಗಿದ್ದ ಅಂತಾರಾಜ್ಯ ಬಸ್ ಸಂಚಾರಕ್ಕೆ ನಿರಸ ಪ್ರತಿಕ್ರಿಯೆ ಇದ್ದು, ಮುಂದಿನ ದಿನಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುವ ಆಶಾಭಾವನೆಯಲ್ಲಿ ಸಾರಿಗೆ ಇಲಾಖೆಗೆ ಇದೆ.