ಬೆಂಗಳೂರು: ನೂತನ ಆರ್ ಅಂಡ್ ಡಿ ನೀತಿಯನ್ನು ಸರ್ಕಾರ ರೂಪಿಸುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಆರ್ ಆ್ಯಂಡ್ ಡಿ ನೀತಿ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣ ತಜ್ಞ, ಪದ್ಮಭೂಷಣ ಡಾ. ಹೆಚ್. ನರಸಿಂಹಯ್ಯ ಅವರ 102 ನೇ ಜನ್ಮದಿನಾಚರಣೆ ಅಂಗವಾಗಿ ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಪ್ರಯೋಗಾಲಯದ ಉದ್ಘಾಟನೆ ಹಾಗೂ ಡಾ ಹೆಚ್ ನರಸಿಂಹಯ್ಯ ಅವರ ಆತ್ಮಕಥನ ಪಾಥ್ ಆಫ್ ಸ್ಟ್ರಗಲ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಗ್ಯಾರೇಜ್ನಿಂದ ಹಿಡಿದು ದೊಡ್ಡ ಸಂಸ್ಥೆಗಳಲ್ಲಿ ನಡೆಯುವ ಸಂಶೋಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಹೊಸ ವಿಚಾರ, ಜ್ಞಾನ ಯಾರಿಗೆ ಬೇಕಾದರೂ ಬರಬಹುದು. ವೈಯಕ್ತಿಕವಾಗಿಯೂ ಸಂಶೋಧನೆ ಮಾಡುವವರಿಗೆ ಪ್ರೋತ್ಸಾಹ ನೀಡಲಾಗುವುದು. ನೀತಿಯ ಸಂಪೂರ್ಣ ಉಪಯೋಗವನ್ನು ನ್ಯಾಷನಲ್ ಶಿಕ್ಷಣ ಸಂಸ್ಥೆ ಪಡೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮಕ್ಕಳು ವಿಷಯದ ಬಗ್ಗೆ ಯಾಕೆ, ಏನು, ಎಲ್ಲಿ ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಆಗ ತಾರ್ಕಿಕ ಚಿಂತನೆ ಬೆಳೆಯುತ್ತದೆ. ತಾರ್ಕಿಕ ಚಿಂತನೆ ಬಂದರೆ ಯಾವುದನ್ನೂ ಬಾಯಿಪಾಠ ಮಾಡುವ ಅವಶ್ಯಕತೆ ಇಲ್ಲ. ಪ್ರಶ್ನೆ ಕೇಳುವ ಅಧಿಕಾರ ಮಕ್ಕಳದ್ದು. ಮಕ್ಕಳ ಕುತೂಹಲವನ್ನು ಉಳಿಸಬೇಕು. ಕುತೂಹಲ ಸಂಶೋಧನೆಗೆ ದಾರಿ. ಈ ಮೂಲವನ್ನಿಟ್ಟುಕೊಂಡು ಕಲಿಕೆಯಾಗಬೇಕು ಎಂದರು.
ನೂತನ ಶಿಕ್ಷಣ ನೀತಿಯಿಂದ ಆಮೂಲಾಗ್ರ ಬದಲಾವಣೆ: ನೂತನ ಶಿಕ್ಷಣ ನೀತಿಯಲ್ಲಿ ಹೇಳಿರುವುದನ್ನು ನ್ಯಾಷನಲ್ ಶಿಕ್ಷಣ ಸಂಸ್ಥೆ ಜಾರಿಗೆ ತರುತ್ತಿದೆ. ನೂತನ ಶಿಕ್ಷಣ ನೀತಿ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರಲಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಯೋಗಶೀಲತೆಯನ್ನು ತಂದಿರುವ ಶಿಕ್ಷಣ ನೀತಿ ವಿಜ್ಞಾನಕ್ಕೆ ಮಹತ್ವವನ್ನು ನೀಡಿದೆ. ಸರ್ಕಾರದ ವತಿಯಿಂದ ಪ್ರತಿ ಶಾಲೆಗೆ 50 ಲಕ್ಷ ರೂ.ಗಳ ಮೌಲ್ಯದ ಅಟಲ್ ಪ್ರಯೋಗಾಲಯ ನಿರ್ಮಿಸಲಾಗುತ್ತಿದೆ. ಸಂಶೋಧನೆಗೆ ಇದರಿಂದ ಅವಕಾಶ ದೊರೆಯಲಿದೆ. ಕರ್ನಾಟಕದಲ್ಲಿ ಈಗಾಗಲೇ ಅಂತಹ ನೂರಾರು ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಿರುವ ಈ ಸಂಸ್ಥೆಗೆ ಮುಂದೆ ಬಹಳ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಭೇಟಿ ಬಗ್ಗೆ ಬಿಎಸ್‌ವೈ ಹೇಳಿದ್ದೇನು?