ಬೆಂಗಳೂರು: ಗಲಭೆಯಲ್ಲಿ ಇಡೀ ಮನೆಯನ್ನೇ ಧ್ವಂಸಗೊಳಿಸಿದ್ದಾರೆ. ಮನೆಯಲ್ಲಿ ಆಸ್ತಿ ಪತ್ರಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಗೃಹಯೋಪಯೋಗಿ ವಸ್ತುಗಳು ಹಾಗೂ ಕಾರು, ಬೈಕ್ಗಳನ್ನು ನಾಶಪಡಿಸಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಮನೆಯಲ್ಲಿದ್ದ ನನ್ನ ತಂದೆ-ತಾಯಿ ಫೋಟೋ ಸುಟ್ಟು ಹೋಗಿರುವುದು ತೀವ್ರ ಬೇಸರವಾಗಿದೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಖೇದ ವ್ಯಕ್ತಪಡಿಸಿದರು.
ಅದು ನಾನು ಹುಟ್ಟಿದ ಮನೆ. ಚಿಕ್ಕ ವಯಸ್ಸಿನಿಂದಲೂ ಇಲ್ಲೇ ಇದ್ದೇನೆ. ನಾನು ಯಾರ ವಿರೋಧವನ್ನೂ ಕಟ್ಟಿಕೊಂಡಿರಲಿಲ್ಲ. ಮುಸಲ್ಮಾನರೆಲ್ಲರೂ ನಾವು ಅಣ್ಣ ತಮ್ಮಂದಿರ ಹಾಗೆ ಇದ್ದೇವೆ. ಯಾಕೆ ಹೀಗಾಯಿತು ಎಂಬುದೇ ಗೊತ್ತಾಗುತ್ತಿಲ್ಲ. ನ್ಯಾಯಯುತ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿವೆ. ಕೆಲ ವಸ್ತುಗಳು ಕಾಣೆಯಾಗಿವೆ. ತಾಯಿಯ ಮಾಂಗಲ್ಯ ಮಾತ್ರ ಬೂದಿಯಿಂದ ಪುತ್ರಿ ಹೆಚ್ಚಿ ತೆಗೆದಿದ್ದಾಳೆ. ಇನ್ನುಳಿದಂತೆ ಏನೂ ಉಳಿದಿಲ್ಲ. ಘಟನೆ ಹೇಗೆ, ಏಕೆ ನಡೆಯಿತು ಎಂದು ಗೊತ್ತಿಲ್ಲ. ಕ್ಷೇತ್ರದ ಜನರು ನನ್ನ ಜೊತೆಗಿದ್ದಾರೆ ಎಂದರು.
ಕ್ಷೇತ್ರದ ಹೊರಗಿನಿಂದ ಬಂದಂತಹ ವ್ಯಕ್ತಿಗಳು ಈ ಕೃತ್ಯ ಎಸೆಗಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು. ಸಿಬಿಐ ತನಿಖೆ ನಡೆದರೆ ಸತ್ಯ ಹೊರ ಬರಲಿದೆ. ಶಾಸಕನಿಗೆ ರಕ್ಷಣೆ ಇಲ್ಲವೆಂದರೆ ನಾನು ಜನರಿಗೆ ಹೇಗೆ ರಕ್ಷಣೆ ನೀಡಲಿ ಎಂದು ಪ್ರತಿಕ್ರಿಯಿಸಿದರು.