ಬೆಂಗಳೂರು: ಉತ್ತರ ಕರ್ನಾಟಕದ ಕಡೆಗಣನೆ ಪದೇ ಪದೇ ಕೇಳಿ ಬರುತ್ತಿರುವ ಕೂಗು. ಆ ಭಾಗದ ಜನ, ರೈತ ಹೋರಾಟಗಾರರು, ಜನಪ್ರತಿನಿಧಿಗಳು ಉತ್ತರ ಕರ್ನಾಟಕ ನಿರ್ಲಕ್ಷ್ಯದ ಬಗ್ಗೆ ಹಲವು ವರ್ಷಗಳಿಂದ ದನಿ ಎತ್ತುತ್ತಲೇ ಇದ್ದಾರೆ.
ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿ ದಶಕ ಕಳೆದರೂ (Relocation of Government Offices to Belagavi Suvarna Sudha) ರಾಜ್ಯಮಟ್ಟದ ಕಚೇರಿಗಳು ಬಂದಿಲ್ಲ. ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಗೋಸ್ಕರ 12 ವರ್ಷದ ಹಿಂದೆ ಬೆಳಗಾವಿಯಲ್ಲಿ ಸುವರ್ಣಸೌಧ (Belagavi Suvarna Soudha) ನಿರ್ಮಿಸಲಾಗಿತ್ತು. ಆದರೆ ಆ ಭವ್ಯ ಕಟ್ಟಡ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲದಂತಾಗಿದೆ. ಬರೇ ಚಳಿಗಾಲದ ಅಧಿವೇಶನ ನಡೆಸಲು ಸೀಮಿತವಾಗಿರುವ ಸುವರ್ಣಸೌಧದಲ್ಲಿ ರಾಜ್ಯ ಮಟ್ಟದ ಕಚೇರಿಗಳು ಕಾರ್ಯನಿರ್ವಹಿಸದೇ ಇರುವ ಬಗ್ಗೆ ಆ ಭಾಗದ ಜನರ ಆಕ್ರೋಶ ಆಗಿದೆ.
ಈ ಆಕ್ರೋಶದ ಮಧ್ಯೆ ಪ್ರತ್ಯೇಕ ರಾಜ್ಯದ ಕೂಗೂ ಕೇಳುತ್ತಲೇ ಇದೆ. ಇದೇ ನಿಟ್ಟಿನಲ್ಲಿ ಬೆಳಗಾವಿಯ ಸುವರ್ಣಸೌಧ ಸೇರಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಕೆಲ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ಈ ಸ್ಥಳಾಂತರದ ಆಶ್ವಾಸನೆ ಕೇವಲ ಆಶ್ವಾಸನೆಯಾಗಿಯೇ ಉಳಿದಿದ್ದರೆ, ಇನ್ನು ಕೆಲವು ಸ್ಥಳಾಂತರದ ಆದೇಶ ಕಡತದ ಮೇಲೆನೇ ಉಳಿದುಕೊಂಡಿದೆ. ಕೆಲ ಕಚೇರಿಗಳ ಸ್ಥಳಾಂತರದ ಆದೇಶ ಹೊರಬಿದ್ದರೂ ಅನುಷ್ಠಾನ ಮಾತ್ರ ಆಗಿಲ್ಲ. ಕುಮಾರಸ್ವಾಮಿಯ ಮೈತ್ರಿ ಅಧಿಕಾರವಧಿಯಲ್ಲಿ ಬೆಳಗಾವಿ ಸುವರ್ಣಸೌಧ ಸೇರಿ ಉತ್ತರ ಕರ್ನಾಟಕ ಭಾಗಕ್ಕೆ 9 ವಿವಿಧ ಪ್ರಮುಖ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸುವ ಬಗ್ಗೆ ಭರವಸೆ ನೀಡಿದ್ದರು. ಈ ಸಂಬಂಧ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು, ಆದೇಶವನ್ನೂ ಹೊರಡಿಸಲಾಗಿತ್ತು. ಆದರೆ ಅದ್ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.
ಒಂಬತ್ತು ಕಚೇರಿಗಳ ಸ್ಥಳಾಂತರದ ಸ್ಥಿತಿಗತಿ ಹೀಗಿದೆ:
2018ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಟ್ಟು 9 ವಿವಿಧ ಕಚೇರಿಗಳನ್ನು ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದರು. ಆದರೆ ಮೂರು ವರ್ಷ ಕಳೆದರೂ ಈ ನಿರ್ಧಾರ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿಲ್ಲ.
ಆಲಮಟ್ಟಿಗೆ ಕೃಷ್ಣ ಭಾಗ್ಯ ಜಲ ನಿಗಮ, ದಾವಣಗೆರೆಗೆ ಕರ್ನಾಟಕ ನೀರಾವರಿ ನಿಗಮ, ಬೆಳಗಾವಿಗೆ ಕರ್ನಾಟಕ ರಾಜ್ಯ ಜವಳಿ ಮೂಲಭೂತ ಅಭಿವೃದ್ಧಿ ನಿಗಮ, ಹಂಪಿಗೆ ಪುರಾತತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆ, ಬೆಳಗಾವಿಗೆ ಕಬ್ಬು ಅಭಿವೃದ್ಧಿ ಆಯುಕ್ತಾಲಯ ಮತ್ತು ಸಕ್ಕರೆ ನಿರ್ದೇಶನಾಲಯ, ಹುಬ್ಬಳ್ಳಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಒಂದು ವಿಭಾಗ, ಧಾರವಾಡಕ್ಕೆ ಕರ್ನಾಟಕ ರಾಜ್ಯ ಮಾನವಹಕ್ಕು ಆಯೋಗದ ಒಬ್ಬ ಸದಸ್ಯ, ಧಾರವಾಡಕ್ಕೆ ಒಂದು ಉಪ ಲೋಕಾಯುಕ್ತ ಕಚೇರಿ ಮತ್ತು ಬೆಳಗಾವಿ ಹಾಗೂ ಕಲಬುರ್ಗಿಗೆ ತಲಾ ಒಂದರಂತೆ ಎರಡು ಮಾಹಿತಿ ಆಯುಕ್ತರ ಕಚೇರಿಯನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಆದರೆ, ಈ ಸ್ಥಳಾಂತರದ ನಿರ್ಧಾರ ಬಹುತೇಕ ಕಡತದ ಆದೇಶವಾಗೇ ಉಳಿದಿದೆ.
2020ರಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಪೀಠವು ಕಾರ್ಯಾರಂಭಿಸಿದೆ. ರಾಜ್ಯ ಮಾಹಿತಿ ಆಯೋಗ ಬೆಳಗಾವಿ ಪೀಠದ ನ್ಯಾಯಾಲಯ ಕಲಾಪ ಜೂನ್ 22 ರಿಂದ ಆರಂಭಗೊಂಡಿದೆ. ಕಲ್ಬುರ್ಗಿಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿರುವ ಮತ್ತೊಂದು ಮಾಹಿತಿ ಆಯೋಗ ಕಚೇರಿ ಸ್ಥಾಪನೆಗೆ ಸೂಕ್ತ ಸ್ಥಳದ ಹುಡುಕಾಟ ನಡೆಸಲಾಗುತ್ತಿದೆ. ಜವಳಿ ಅಭಿವೃದ್ಧಿ ನಿಗಮದ ಕಚೇರಿಯೂ ಬೆಳಗಾವಿಗೆ 1.10.2019ರಲ್ಲಿ ಸ್ಥಳಾಂತರಗೊಂಡಿದ್ದು, ಸಂಪೂರ್ಣವಾಗಿ ಬೆಳಗಾವಿಯಿಂದಲೇ ಕಾರ್ಯನಿರ್ವಹಿಸುತ್ತಿದೆ. ಆದರೆ, ಎಲ್ಲಾ ಆಡಳಿತಾತ್ಮಕ ಕೆಲಸಗಳಿಗೆ ಅಧಿಕಾರಿಗಳು ಬೆಂಗಳೂರಿಗೆ ನಿತ್ಯ ಬಂದು ಹೋಗುವಂಥ ಪರಿಸ್ಥಿತಿ ಎದುರಾಗಿದೆ.
ಅದೇ ರೀತಿ ಕೃಷ್ಣ ಭಾಗ್ಯ ಜಲ ನಿಗಮದ ಕೆಲ ಕಚೇರಿ ಆಲಮಟ್ಟಿಗೆ ಸ್ಥಳಾಂತರಗೊಂಡಿದ್ದು, ಅಲ್ಲಿಂದಲೇ ಕಾರ್ಯನಿರ್ವಹಿಸುತ್ತಿದೆ. ಆದರೆ ಹಲವು ತಾಂತ್ರಿಕ ಸಮಿತಿಗಳು ಬೆಂಗಳೂರಿನಲ್ಲೇ ಇರುವುದರಿಂದ ಕಾರ್ಯನಿರ್ವಹಣೆ ಕಷ್ಟವಾಗುತ್ತಿದೆ. ಇತ್ತ ದಾವಣಗೆರೆಗೆ ಕರ್ನಾಟಕ ನೀರಾವರಿ ನಿಗಮ ಸ್ಥಳಾಂತರಬಾಗಬೇಕಿದೆ. ಈ ಎರಡು ನಿಗಮಗಳ ಸಂಬಂಧ ಜಲಸಂಪನ್ಮೂಲ ಇಲಾಖೆ ಯೋಜನಾ ಇಲಾಖೆಗೆ ಪತ್ರ ಬರೆದು ಆಡಳಿತಾತ್ಮಕ ಕಾರಣದಿಂದ ಎಲ್ಲಾ ಕಚೇರಿಗಳ ಸ್ಥಳಾಂತರ ಕಷ್ಟ ಸಾಧ್ಯವೆಂದು ತಿಳಿಸಿದೆ. ಈ ಸಂಬಂಧ ಮಾರ್ಚ್ ನಲ್ಲಿ ಪತ್ರ ಬರೆಯಲಾಗಿತ್ತು. ಸಿಎಂ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ.
ಇತ್ತ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯವನ್ನು ಬೆಂಗಳೂರಿನಿಂದ ಬೆಳಗಾವಿ ಸುವರ್ಣಸೌಧಕ್ಕೆ ಸ್ಥಳಾಂತರಿಸುವ ಆದೇಶ ಹೊರಡಿಸಲಾಗಿದ್ದರೂ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸೆ.30ಕ್ಕೆ ಈ ಸಂಬಂಧ ಆದೇಶ ಹೊರಡಿಸಲಾಗಿತ್ತು. ಆದರೆ, ಆದೇಶ ಹೊರಡಿಸಿ ತಿಂಗಳಾದರೂ ಪೂರ್ಣ ಪ್ರಮಾಣದ ಸ್ಥಳಾಂತರದ ಪ್ರಕ್ರಿಯೆ ನಡೆದಿಲ್ಲ.
ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯನ್ನು ವಿಭಜಿಸಿ ಒಂದು ವಿಭಾಗವನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಆದರೆ ಈ ವಿಭಜನೆ ಪ್ರಸ್ತಾಪ ನಗರಾಭಿವೃದ್ಧಿ ಇಲಾಖೆಯಲ್ಲಿದ್ದು, ಹಣಕಾಸು ಇಲಾಖೆ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ. ಇತ್ತ ಮೈಸೂರಿನಲ್ಲಿದ್ದ ಪುರಾತತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯನ್ನು ಹಂಪಿಗೆ ಸ್ಥಳಾಂತರ ಮಾಡಲಾಗಿದೆ. ಏಪ್ರಿಲ್ 2019ರಿಂದ ಉಪನಿರ್ದೇಶಕರ ಕಚೇರಿ ಹಂಪಿಯಿಂದ ಕಾರ್ಯನಿರ್ವಹಿಸುತ್ತಿದೆ.
ಉಪ ಲೋಕಾಯುಕ್ತ, ಮಾನವಹಕ್ಕು ಆಯೋಗ ಸ್ಥಳಾಂತರ ಇಲ್ಲ:
ಧಾರವಾಡಕ್ಕೆ ಕರ್ನಾಟಕ ರಾಜ್ಯ ಮಾನವಹಕ್ಕು ಆಯೋಗದ ಒಬ್ಬ ಸದಸ್ಯ ಹಾಗೂ ಒಂದು ಉಪ ಲೋಕಾಯುಕ್ತ ಕಚೇರಿಯನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಆದರೆ, ಎರಡನ್ನೂ ಸ್ಥಳಾಂತರಿಸುವ ನಿರ್ಧಾರವನ್ನು ಕೈಬಿಡಲಾಗಿದೆ. ತಾಂತ್ರಿಕ, ಆಡಳಿತಾತ್ಮಕ ತೊಡಕಿನ ಹಿನ್ನೆಲೆ ಸ್ಥಳಾಂತರ ಆದೇಶವನ್ನು ಕೈ ಬಿಡಲಾಗಿದೆ. 2019ರಲ್ಲೇ ಈ ಸಂಬಂಧ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕಾನೂನು ಇಲಾಖೆ ಈ ಸಂಬಂಧ ಮಾಹಿತಿ ನೀಡಿದೆ.
ಹೀಗಾಗಿ, ಕರ್ನಾಟಕ ಮಾಹಿತಿ ಆಯೋಗದ ಪೀಠ ಒಂದು ಬಿಟ್ಟರೆ ಬೇರೆ ಯಾವುದೇ ರಾಜ್ಯ ಮಟ್ಟದ ಸರ್ಕಾರಿ ಕಚೇರಿಗಳು ಸಂಪೂರ್ಣವಾಗಿ ಸ್ಥಳಾಂತರಗೊಂಡಿಲ್ಲ. ಸ್ಥಳಾಂತರಗೊಂಡ ಕೆಲ ಕಚೇರಿಗಳು ಈಗಲೂ ಬಹುತೇಕ ಆಡಳಿತಾತ್ಮಕವಾಗಿ ಬೆಂಗಳೂರಿನಿಂದಲೇ ಕಾರ್ಯನಿರ್ವಹಿಸುತ್ತಿವೆ. ಬೆಳಗಾವಿ ಸುವರ್ಣಸೌಧದಲ್ಲಿ ಸುಮಾರು 24 ಜಿಲ್ಲಾ ಮಟ್ಟದ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆಯಷ್ಟೇ.
ಆದೇಶ ಹೊರಡಿಸಿದರೂ ಸ್ಥಳಾಂತರಕ್ಕೆ ಮೀನಾಮೇಷ:
ಹಮವು ನಿಗಮ, ಮಂಡಳಿಗಳನ್ನು ಉತ್ತರ ಕರ್ನಾಟಕ ಭಾಗದ ವಿವಿಧೆಡೆ ಸ್ಥಳಾಂತರಿಸಲು ಆದೇಶ ಹೊರಡಿಸಿದರೂ ಅಧಿಕಾರಿಗ ವರ್ಗ ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಜನವರಿ 2019ರಲ್ಲೇ ಹಲವು ನಿಗಮ, ಮಂಡಳಿಗಳ ಸ್ಥಳಾಂತರಕ್ಕೆ ಆದೇಶ ಹೊರಡಿಸಲಾಗಿದೆ. ಆದರೆ ಈವರೆಗೂ ಅದು ಕಾರ್ಯರೂಪಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಈ ಸಂಬಂಧ ಸ್ವತಃ ಸಿಎಂ ಬೊಮ್ಮಾಯಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಚೇರಿಗಳ ಸ್ಥಳಾಂತರಕ್ಕೆ ಅಧಿಕಾರಿ ವರ್ಗ ತಾಂತ್ರಿಕ ಅಡಚಣೆಯ ಕಾರಣವನ್ನು ಮುಂದಿಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಚೇರಿಗಳು ಸ್ಥಳಾಂತರಗೊಂಡರೆ ಅಧಿಕಾರಿಗಳು ಆಡಳಿತಾತ್ಮಕ ಕೆಲಸ, ಹಣಕಾಸು ಸಂಬಂಧಿತ ವಿಚಾರಗಳು, ಸಚಿವರ ಭೇಟಿಗಾಗಿ ಬೆಂಗಳೂರಿಗೆ ಪದೇ ಪದೆ ಬರುವುದು ಅನಿವಾರ್ಯವಾಗಲಿದೆ. ಹೀಗಾಗಿ ಸ್ಥಳಾಂತರ ಕಾರ್ಯಸಾಧುವಲ್ಲ ಎಂಬ ಕಾರಣಗಳನ್ನು ಮುಂದಿಟ್ಟುಕೊಂಡು ಅಧಿಕಾರಿ ವರ್ಗ ಅಡಚಣೆ ಒಡ್ಡುತ್ತಿದ್ದಾರೆ ಎಂದು ರೈತ ಹೋರಾಟಗಾರ ವೀರೇಶ್ ಸೊಬರದ ಮಠ್ ಆರೋಪಿಸಿದ್ದಾರೆ.