ಬೆಂಗಳೂರು: ಮೈಸೂರಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮಹಿಳೆಯರ ಮೇಲೆ ಇಂತಹ ದುಷ್ಕೃತ್ಯ ಎಸಗುವುದು ಅಕ್ಷಮ್ಯ ಅಪರಾಧವಾಗಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಹಿಳಾ ಸಂಘಟನೆ ಸೇರಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದಿತ್ತು.
ಆದರೂ ಅತ್ಯಾಚಾರದ ಪ್ರಕರಣಗಳು ಮರುಕಳಿಸುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾದ ಪ್ರಕರಣಗಳು, ಶಿಕ್ಷೆಯಾದ ಪ್ರಮಾಣ ಹಾಗೂ ಸಾಕ್ಷ್ಯಾಧಾರಗಳಿಲ್ಲದೆ ವಜಾಗೊಂಡಿರುವ ಪ್ರಕರಣಗಳೆಷ್ಟು ಎಂಬುದರ ಮಾಹಿತಿ ಇಲ್ಲಿದೆ.
2021ರ ಜುಲೈ ಅಂತ್ಯಗೊಂಡಂತೆ ಕಳೆದ ಏಳು ತಿಂಗಳಲ್ಲಿ 305 ಅತ್ಯಾಚಾರ ಪ್ರಕರಣ ದಾಖಲಾಗಿವೆ. ತಿಂಗಳಿಗೆ ಸುಮಾರು 44 ಪ್ರಕರಣ ವರದಿಯಾಗಿವೆ. ರಾಜ್ಯ ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, 2018ರಲ್ಲಿ 485, 2019ರಲ್ಲಿ 497 ಮತ್ತು 2020ರಲ್ಲಿ 472 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಇದು ನಾಲ್ಕು ವರ್ಷಗಳಲ್ಲಿ ತಿಂಗಳಿಗೆ ಸರಾಸರಿ 40ರಿಂದ 42 ಪ್ರಕರಣ ದಾಖಲಾಗಿರುವುದು ತೀವ್ರ ಅತಂಕಕಾರಿಯಾಗಿದೆ.
ಈ ಪೈಕಿ ರಾಜಧಾನಿಯಲ್ಲಿ 2018ರಿಂದ 2021ರ ಜೂನ್ ಅಂತ್ಯಕ್ಕೆ 414 ಅತ್ಯಾಚಾರ ಪ್ರಕರಣ ವರದಿಯಾಗಿವೆ. 2018ರಲ್ಲಿ 106, 2019ರಲ್ಲಿ 147 ಹಾಗೂ 2020ರಲ್ಲಿ 108 ಅತ್ಯಾಚಾರ ಪ್ರಕರಣ ದಾಖಲಾಗಿವೆ. ಈ ವರ್ಷ, ಜೂನ್ ಅಂತ್ಯಕ್ಕೆ 53 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
2018ರಿಂದ ಇದುವರೆಗೂ ರಾಜ್ಯದಲ್ಲಿ 1,300ಕ್ಕೂ ಹೆಚ್ಚು ಶಂಕಿತರನ್ನು ಅತ್ಯಾಚಾರ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಈ ಅವಧಿಯಲ್ಲಿ ಕೇವಲ ಆರು ಮಂದಿ ಮಾತ್ರ ಶಿಕ್ಷೆಗೊಳಗಾಗಿದ್ದಾರೆ ಮತ್ತು 50 ಮಂದಿ ಖುಲಾಸೆಗೊಂಡಿದ್ದಾರೆ.
ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯನ್ನು ಶಿಕ್ಷೆಗೆ ಒಳಪಡಿಸುವಲ್ಲಿ ಮೊದಲ 60 ದಿನಗಳ ಕಾಲಾವಧಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸುವುದು ಬಹುಮುಖ್ಯ ಪಾತ್ರ ವಹಿಸಲಿದೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತೆ, ಕುಟುಂಬಸ್ಥರ ಹೇಳಿಕೆ ಮುಖ್ಯಪಾತ್ರ ವಹಿಸಲಿದೆ.
ಆದರೆ ಕೆಲವು ಸಂದರ್ಭಗಳಲ್ಲಿ, ಅವರು ಸಾಮಾಜಿಕ ಕಳಂಕಕ್ಕೆ ಹೆದರಿ ಕುಟುಂಬ ಮತ್ತು ಇತರರಿಂದ ಒತ್ತಡಕ್ಕೆ ಒಳಗಾಗಿ ತಮ್ಮ ಹೇಳಿಕೆ ಬದಲಾಯಿಸುತ್ತಾರೆ. ಅದಕ್ಕಾಗಿಯೇ ನಾವು 164 ಸಿಆರ್‌ಪಿಸಿ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ತಮ್ಮ ಸ್ವಯಂಪ್ರೇರಿತ ಹೇಳಿಕೆಯನ್ನು ದಾಖಲಿಸಲು ಮುಂದಾಗುತ್ತೇವೆ. ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಪ್ರಕರಣದಲ್ಲಿ ಆರೋಪಿಗಳ ಶಿಕ್ಷೆಯಾಗಲು ಸಹಕಾರಿಯಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಲು ಬದುಕುಳಿದವರ ಹೇಳಿಕೆ ಮತ್ತು ವೈದ್ಯಕೀಯ ದಾಖಲೆಗಳು ನಿರ್ಣಾಯಕ. ಬದುಕುಳಿದವರ ಹೇಳುವ ಸಾಕ್ಷಿಗಳು ನೀಡಿದ ಹೇಳಿಕೆಗಳು ವಿಚಾರಣೆಯ ಮೂಲಕ ಬದಲಾಗದೆ ಉಳಿಯಬೇಕು. ಕೆಲವು ಸಂದರ್ಭಗಳಲ್ಲಿ, ಆರೋಪಿಗಳು ಬದುಕುಳಿದವರಿಗೆ ತಿಳಿದಿರುವ ವ್ಯಕ್ತಿಯಾಗಿರುವಾಗ, ಅವರ ಕುಟುಂಬಗಳು ಮದುವೆ ಮಾಡಿ ರಾಜಿ ಮಾಡಿಕೊಳ್ಳುತ್ತವೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.