ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಳೆದ ಶುಕ್ರವಾರ ದಿಢೀರ್ ಹೃದಯಾಘಾತದಿಂದ ನಿಧನರಾದರು. ಈ ಘಟನೆ ನಡೆದ ಬಳಿಕ ಅಪ್ಪು ಅಭಿಮಾನಿಗಳು, ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಅಲ್ಲದೆ, ಅಪ್ಪುಗೆ ನೀಡಿದ ಚಿಕಿತ್ಸೆ ಸೇರಿ ಆ ದಿನ ಆಸ್ಪತ್ರೆಯಲ್ಲಿ ನಡೆದ ಘಟನೆಯ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದೀಗ ಈ ಕುರಿತು ಪುನೀತ್ಗೆ ಮೊದಲು ಚಿಕಿತ್ಸೆ ನೀಡಿದ ವೈದ್ಯ ಡಾ.ರಮಣ್ ರಾವ್ ಸ್ಪಷನೆ ನೀಡಿದ್ದಾರೆ.
ಡಾ.ರಮಣ್ ರಾವ್ ಸ್ಪಷ್ಟನೆ:
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ವೈದ್ಯ ಡಾ.ರಮಣ್ ರಾವ್, 'ಪುನೀತ್ ಅವರು ನಮ್ಮ ಕ್ಲಿನಿಕ್ ಗೆ ಸರಿಸುಮಾರು ಬೆಳಗ್ಗೆ 11.15 ರಿಂದ 11.20ರ ಹೊತ್ತಿಗೆ ಪುನೀತ್ ನಡೆದುಕೊಂಡೇ ಬಂದರು. ಬಂದು ಕೇವಲ ಒಂದು ನಿಮಿಷ ಹೊರಗೆ ಕುಳಿತಿದ್ದರಷ್ಟೇ. ಆಗ ನಮ್ಮ ಸಹಾಯಕರು ಪುನೀತ್ ಅವರು ಬಂದಿದ್ದಾರೆ ಎಂದು ಹೇಳಿದರು. ಅವರಿಗೆ ಆಗ ನೋವಾಗಲಿ, ಸುಸ್ತಾಗಲಿ ಇರಲಿಲ್ಲ. ನಾನು ಚೆಕ್ ಮಾಡುತ್ತಿದ್ದ ಪೇಶೆಂಟನ್ನು ಹೊರಗೆ ಕಳುಹಿಸಿ, ಕೂಡಲೇ ಅಪ್ಪು ಅವರನ್ನು ಒಳಗೆ ಕರೆದು ವಿಚಾರಿಸಿದೆ.
ಪುನೀತ್ ಅವ್ರಿಗೆ 4ರಿಂದ 5 ನಿಮಿಷ ಚೆಕ್ ಮಾಡಿ, ಶ್ವಾಸಕೋಶ, ಹೃದಯಬಡಿತವನ್ನು ಚೆಕ್ ಮಾಡಿದೆ. ಆಗ ಎಲ್ಲವೂ ಸರಿ ಇತ್ತು. ಆದರೆ ಅಪ್ಪು ವಿಪರೀತ ಬೆವರುತ್ತಿದ್ದರು. ಯಾಕೆ ಇಷ್ಟು ಬೆವರುತ್ತಿದ್ದೀರಿ ಅಪ್ಪು ಎಂದು ಕೇಳಿದಾಗ, ನಾನು ಈಗ ತಾನೇ ಜಿಮ್ನಲ್ಲಿ ವರ್ಕ್ ಔಟ್ ಮಾಡುತ್ತಿದ್ದೆ, ಅದಕ್ಕೆ ಈ ಬೆವರು ಎಂದರು. ಆಗ ನಾನು ಇಲ್ಲ ಇಸಿಜಿ ಮಾಡಬೇಕು ಎಂದೆ, ತಕ್ಷಣ ಮಾಡೋಣ ಎಂದು ಪಕ್ಕದ ರೂಮಿಗೆ ಕರೆದುಕೊಂಡು ಹೋಗಿ ಶರ್ಟ್ ತೆಗೆದು ಜೆಲ್ ಹಾಕಿ ಇಸಿಜಿ ಮಾಡಿ, ಒಂದುೂವರೆ ನಿಮಿಷ ಆಯಿತು. ಇಸಿಜಿ ವರದಿ ಬರಲು ಮತ್ತೆ ಒಂದು 30 ಸೆಕೆಂಡ್, ಬಹುಶಃ ಎರಡೂವರೆ ನಿಮಿಷದಲ್ಲಿ ಅದು ಕೂಡ ಆಯಿತು. ಇಸಿಜಿಯಲ್ಲಿ ಹೃದಯಕ್ಕೆ ತೀವ್ರ ಒತ್ತಡವಾಗಿದ್ದಂತೆ ಕಂಡುಬಂತು.
ಆಗ ಅವರ ಪತ್ನಿ ಅಶ್ವಿನಿಯರಿಗೆ ಅಪ್ಪು ಅವರ ಹೃದಯಕ್ಕೆ ತೀವ್ರ ಒತ್ತಡ ಬಿದ್ದಂತೆ ಕಂಡುಬರುತ್ತಿದೆ, ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕು ಎಂದೆ. ಆಗ ಅಶ್ವಿನಿಯವರು ಫೋನ್ ಮಾಡಲು ಹೊರಗೆ ಬಂದು ತಮ್ಮ ಗನ್‌ಮ್ಯಾನ್‌ಗೆ ಫೋನ್ ಮಾಡಿದರು. ಅಷ್ಟೊತ್ತಿಗೆ ಅಪ್ಪು ತಲೆ ಸುತ್ತು ಬರುತ್ತಿದೆ ಎಂದರು. ಆಗ ನಾನು ಕೆಳಗೆ ಕುರುಸಿ, ಮಲಗಿಸಿದೆ. ಬಳಿಕ ನಿಂತುಕೊಳ್ಳುವುದು ಬೇಡ, ನಡೆಯುವುದು ಬೇಡ ಎಂದೆ. ಅತಿಯಾದ ತಲೆಸುತ್ತು ಇದ್ದ ಕಾರಣ ಮೂವರ ಸಹಾಯ ತೆಗೆದುಕೊಂಡು ಕಾರಿನ ಬಳಿ ಎತ್ತಿಕೊಂಡು ಹೋಗಿ ಮಲಗಿಸಿದೆವು. ಆಗ ಅಪ್ಪು ಮಾತನಾಡುತ್ತಿದ್ದು, ಉಸಿರಾಡುತ್ತಿದ್ದರು, ಪಲ್ಸ್ ಕೂಡ ಚೆನ್ನಾಗಿಯೇ ಇತ್ತು. ಅವರು ವಿಕ್ರಂ ಆಸ್ಪತ್ರೆಗೆ ಹೊರಟರು.
ನಮ್ಮದು ಬರೀ ಕ್ಲಿನಿಕ್ ಅಷ್ಟೆ, ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಹೃದಯದಲ್ಲಿ ಏನಾದರೂ ಸಮಸ್ಯೆಯಿದ್ದರೆ ಬಾಯಲ್ಲಿಟ್ಟುಕೊಳ್ಳಲು ಮಾತ್ರೆ ಕೊಟ್ಟಿದ್ದೆ. ನಂತರವೇ ಕಳುಹಿಸಿಕೊಟ್ಟೆ. ಇನ್ನು ಆಂಬ್ಯುಲೆನ್ಸ್ ಗೆ ಫೋನ್ ಮಾಡಿ ಅದು ಬಂದು ಕರೆದುಕೊಂಡು ಹೋಗುವಷ್ಟು ತುಂಬಾ ಹೊತ್ತು ಆಗುತ್ತೆ ಎಂಬ ಕಾರಣಕ್ಕೆ ನಾನು ಕಾರಲ್ಲೇ ಕರೆದುಕೊಂಡು ಹೋಗಿ ಅಂತಾ ಹೇಳಿದೆ. ನನ್ನ ಮಗನಿಗೆ ಈ ಪರಿಸ್ಥಿತಿ ಬಂದಿದ್ದರೂ ಇದೇ ರೀತಿ ಮಾಡುತ್ತಿದ್ದೆ, ಅದೇ ರೀತಿ ನಾನು ಪುನೀತ್‌ಗೂ ಮಾಡಿದ್ದೇನೆ. ನನ್ನ ಕಡೆಯಿಂದ ಯಾವುದೇ ಸಮಸ್ಯೆ ಆಗಿಲ್ಲ' ಎಂದು ಡಾ. ರಮಣರಾವ್ ಎಲ್ಲಾ ಆರೋಪಗಳಿಗೂ ಸ್ಪಷ್ಟನೆ ನೀಡಿದರು.
ಇನ್ನು ಸೆಲೆಬ್ರಿಟಿಯಾಗಿದ್ದರೆ ಪ್ರತಿಯೊಂದು ವಿಚಾರವೂ ಜನರಿಗೆ ಗೊತ್ತಾಗುವುದಿಲ್ಲ. ಅವರ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಹೊರಗೆ ಜನಕ್ಕೆ ಏನೇನು ಹೇಳಬೇಕು ನನಗೆ ಗೊತ್ತಿದೆ. ಅದಕ್ಕಿಂತ ಹೆಚ್ಚು ಹೇಳಲು ಸಾಧ್ಯವಿಲ್ಲ, ಅಪ್ಪು ಇದ್ದ ಸ್ಥಿತಿಗೆ ನಾನು ಸರಿಯಾದ ಚಿಕಿತ್ಸೆ ನೀಡಿದ್ದೇನೆ ಎಂದು ಡಾ. ರಮಣ್ ರಾವ್ ಮಾಧ್ಯಮದವರಿಗೆ ತಿಳಿಸಿದರು.