ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್ ರಮೇಶ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮತಿ ಮೇರೆಗೆ 7 ರಾಜ್ಯಗಳ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಕರ್ನಾಟಕದಿಂದ ನಿರೀಕ್ಷೆಯಂತೆ ಜೈರಾಮ್ ರಮೇಶ್ ಹೆಸರನ್ನು ಘೋಷಿಸಿದ್ದಾರೆ.
ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೈರಾಮ್ ರಮೇಶ್ ಅವರು ಆಯ್ಕೆಗೆ ಪರಿಗಣಿಸಲ್ಪಟ್ಟಿದ್ದಾರೆ. ಸಾಕಷ್ಟು ಕಾಂಗ್ರೆಸ್ ನಾಯಕರು ಟಿಕೆಟ್ಗಾಗಿ ಪ್ರಯತ್ನ ನಡೆಸಿದ್ದರು. ರಾಜ್ಯದ ನಾಯಕರಿಗೆ ಅವಕಾಶ ನೀಡಬೇಕು ಎಂಬ ಮಾತನ್ನು ಸಹ ಕೆಲವರು ಆಡಿದ್ದರು. ಆದರೆ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಈ ಹಿಂದೆ ಆಯ್ಕೆಗೆ ಪರಿಗಣಿಸಿದ ರೀತಿಯಲ್ಲಿಯೇ ಅಂತಿಮ ಪ್ರಕಟಣೆ ಹೊರಡಿಸಿದ್ದಾರೆ.
ಜೈರಾಮ್ ರಮೇಶ್ ಆಯ್ಕೆಯನ್ನು ವಾರದ ಹಿಂದೆಯೇ ಪೂರ್ಣಗೊಳಿಸಿದ ರಾಷ್ಟ್ರೀಯ ನಾಯಕರು ಅಧಿಕೃತ ಘೋಷಣೆಯನ್ನು ಇಂದು ಮಾಡಿದ್ದಾರೆ. ಈಗಾಗಲೇ ಜೈರಾಮ್ ರಮೇಶ್ ರಾಜ್ಯಕ್ಕೆ ಭೇಟಿ ನೀಡಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ನಾಳೆ ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಶಾಸಕಾಂಗದ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿದ್ದು, ಇದಾದ ಬಳಿಕ ಜೈರಾಮ್ ರಮೇಶ್ ಜೊತೆ ರಾಜ್ಯ ನಾಯಕರು ತೆರಳಿ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೆಲ ಗಂಟೆ ಮುನ್ನ ಹೈಕಮಾಂಡ್ನಿಂದ ಅಧಿಕೃತವಾಗಿ ಜೈರಾಮ್ ರಮೇಶ್ ಹೆಸರು ಪ್ರಕಟವಾಗಿದೆ.
ಓದಿ: ಮಳಲಿ ವಿವಾದ: ಮಸೀದಿ ಆಡಳಿತ ಸಮಿತಿಯೊಂದಿಗೆ ವಿಶ್ವ ಹಿಂದೂ ಪರಿಷತ್, ಶಾಸಕರ ಸಭೆ