ಬೆಂಗಳೂರು : ರಾಜ್ಯದಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಯನ್ನು ಫೆಬ್ರವರಿ 22ರಿಂದ ನಡೆಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆ ನಿರ್ಧರಿಸಿದೆ. ಈ ಸಂಬಂಧ ಸುತ್ತೋಲೆ ಕೂಡ ಹೊರಡಿಸಿದೆ.
ಪರೀಕ್ಷೆ ಮುಂದೂಡುವಂತೆ ಆರೋಗ್ಯ ಸಚಿವ ಡಾ.ಸುಧಾಕರ್ ನಿನ್ನೆಯಷ್ಟೇ ವಿವಿಗೆ ಪತ್ರ ಬರೆದಿದ್ದರು. ಆದರೆ, ಇದಕ್ಕೆ ಸ್ಪಂದಿಸದ ವಿವಿ ಮಾತ್ರ ನಿಗದಿಯಂತೆ ಪರೀಕ್ಷೆ ನಡೆಸಲು ಮುಂದಾಗಿದೆ. ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಿವೆ. ಮೇನಿಂದ ಜುಲೈ ತಿಂಗಳವರೆಗೂ ಕೋವಿಡ್ ಕಾರಣ ಆನ್‌ಲೈನ್‌ನಲ್ಲಿಯೇ ತರಗತಿಗಳು ನಡೆದಿದ್ದವು.
ಅಗತ್ಯವಿದ್ದಷ್ಟು ಕ್ಲಿನಿಕಲ್ ಪೋಸ್ಟಿಂಗ್ ಸಹ ಆಗಿಲ್ಲ. ಕೋವಿಡ್ ಸಂದರ್ಭದಲ್ಲಿ ಕೆಲವು ತಿಂಗಳುಗಳ ಕಾಲ ಕೋವಿಡ್ ಕರ್ತವ್ಯ ನಿರ್ವಹಿಸಿದ ಕಾರಣದಿಂದಾಗಿ ಪರೀಕ್ಷೆ ತಯಾರಿಗೆ ಸಮಯ ಕಡಿಮೆ ಇದೆ.
ಹೀಗಾಗಿ, ಪರೀಕ್ಷೆಯನ್ನು ಮುಂದೂಡುವಂತೆ ವಿದ್ಯಾರ್ಥಿಗಳು ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ್ದ ಸಚಿವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಗೂ ಪರೀಕ್ಷೆ ಮುಂದೂಡಲು ಮನವಿ ಮಾಡಿ ನಿನ್ನೆ ಪತ್ರ ಬರೆದಿದ್ದರು. ಆದರೆ, ಇದೀಗ ನಿಗದಿಯಂತೆ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆ ನಡೆಯಲಿದೆ ಅಂತಾ ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದೆ.
ಫೆ.22ರಿಂದ ಪರೀಕ್ಷೆ ನಡೆಸಲು ರಾಜೀವ್ ಗಾಂಧಿ ವಿವಿ ತೀರ್ಮಾನ ಮಾಡಿದೆ. ಈಗಾಗಲೇ ಎನ್‌ಎಂಸಿ ಆಕ್ಸೆಸರಿ ಆಧಾರದಂತೆ ನೀಟ್ ಪಿಜಿ ಪ್ರವೇಶ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ರಾಜೀವ್ ಗಾಂಧಿ ವಿವಿ ಕಾನ್ವಕೇಷನ್ ದಿನಾಂಕ ಹಾಗೂ ಎಂಬಿಬಿಎಸ್ ಪರೀಕ್ಷೆಯ ದಿನಾಂಕಗಳೆಲ್ಲವೂ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರ ಸಲಹೆ ಪಡೆದು ನಿಗದಿಗೊಳಿಸಲಾಗಿದೆ.
ಅಲ್ಲದೇ ಇದೇ ಮೊದಲ ಬಾರಿಗೆ ಪ್ರತಿ ವಿಷಯದ ಪರೀಕ್ಷೆಗೆ ಎರಡು ದಿನಗಳ ಅಂತರ ಕೊಟ್ಟು ಪರೀಕ್ಷಾ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಇತರೆ ರಾಜ್ಯಗಳಲ್ಲಿ ನಿಗದಿಯಂತೆ ಪರೀಕ್ಷೆ ನಡೆಸಲಾಗ್ತಿದೆ. ಆದ್ದರಿಂದ ನಮ್ಮ ರಾಜ್ಯದಲ್ಲೂ ನಿಗದಿಯಂತೆ ಪರೀಕ್ಷೆ ನಡೆಯಲಿದ್ದು, ಯಾವುದೇ ಬದಲಾವಣೆ ಇಲ್ಲ ಅಂತಾ ವಿವಿ ಸ್ಪಷ್ಟಪಡಿಸಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ