ಬೆಂಗಳೂರು: ಖಾತೆ ಮರು ಹಂಚಿಕೆ ನಂತರ ಕೆಲವರಲ್ಲಿ ಕಾಣಿಸಿಕೊಂಡಿದ್ದ ಅಸಮಾಧಾನ ಶಮನವಾಗಿದೆ. ಈಗ ಯಾವುದೇ ರೀತಿಯ ಗೊಂದಲ ಇಲ್ಲ. ಸಮಸ್ಯೆ ಮುಕ್ತಾಯವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.
ಸಿಎಂ ನಿವಾಸ ಕಾವೇರಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಖಾತೆಯಲ್ಲಿ ಕ್ಯಾತೆ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು ಈಗ ಎಲ್ಲಾ ಸುಖಾಂತ್ಯವಾಗಿದೆ. ಎಲ್ಲಾ ಅಸಮಾಧಾನಿತ ಸಚಿವರು ಮುಖ್ಯಮಂತ್ರಿಗಳ ಮನೆಗೆ ಬಂದಿದ್ದರು.
ಶಂಕರ್ ಕೂಡ ಅವರ ಕುಟುಂಬದ ಜೊತೆ ಬಂದು ತೋಟಗಾರಿಕೆ, ರೇಷ್ಮೆ ಖಾತೆಗೆ ಒಪ್ಪಿಗೆ ಸೂಚಿಸಿದ್ದಾರೆ. ನಿನ್ನೆ ರಾತ್ರಿಯೇ ಎಂಟಿಬಿ ನಾಗರಾಜ್ ಅವರನ್ನು ಕರೆಸಿಕೊಂಡು ಮಧ್ಯರಾತ್ರಿವರೆಗೂ ಚರ್ಚೆ ಮಾಡಲಾಗಿತ್ತು. ಅಬಕಾರಿ ಖಾತೆ ಬೇಡ ಎಂದಿದ್ದಕ್ಕೆ, ಪೌರಾಡಳಿತ ಮತ್ತು ಸಕ್ಕರೆ ಇಲಾಖೆಯನ್ನು ಕೊಡಲಾಗಿದೆ.
ಇನ್ಯಾರದ್ದೂ ಸಮಸ್ಯೆ ಇಲ್ಲ. ಎಲ್ಲಾ ಸಮಸ್ಯೆಗಳು ಸುಖಾಂತ್ಯವಾಗಿದೆ. ಇಡೀ ಸರ್ಕಾರ ಯಡಿಯೂರಪ್ಪನವರ ನೇತೃತ್ವದಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತದೆ. ಯಡಿಯೂರಪ್ಪನವರು ರಚನೆ ಮಾಡಿರುವ ಮಂತ್ರಿಮಂಡಲದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ, ಸಮಸ್ಯೆಗಳೆಲ್ಲ ಮುಕ್ತಾಯವಾಗಿವೆ ಎಂದು ತಿಳಿಸಿದರು.
ಓದಿ-ಮೋದಿ ಕಾಲದಲ್ಲಿಯೂ ಧೂಳೆಬ್ಬಿಸುತ್ತಿವೆ ನೆಹರು ಜಮಾನದ ಬೈಕ್ಗಳು: ಉಡುಪಿ ಯುವಕನ ಬೈಕ್ ಕಲೆಕ್ಷನ್ಗೆ ಜನ ಫಿದಾ
ಹಾವೇರಿ ಉಸ್ತುವಾರಿ ಹಂಚಿಕೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ
ಇದೇ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಖಾತೆಗಳ ಹಂಚಿಕೆ ಸಿಎಂ ಪರಮಾಧಿಕಾರ. ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಹಂಚಿಕೆ ಮಾಡುತ್ತಾರೆ. ಕಳೆದ ಒಂದು ವರ್ಷದಲ್ಲಿ ಎರಡು ಜಿಲ್ಲೆಯ ಉಸ್ತುವಾರಿಯನ್ನು ನನಗೆ ಕೊಟ್ಟಿದ್ದರು.
ಈಗ ಸಂಪೂರ್ಣ ಮಂತ್ರಿಮಂಡಲ ರಚನೆ ಆದ ನಂತರ ಜಿಲ್ಲೆಗಳು ಕಡಿಮೆ ಇವೆ. ಮಂತ್ರಿಗಳು ಜಾಸ್ತಿ ಇದ್ದಾರೆ. ಹಾಗಾಗಿ ಯಾರಿಗೆ ಯಾವ ಜವಾಬ್ದಾರಿ ಕೊಡಬೇಕು, ಯಾವ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಕೊಡಬೇಕು ಎನ್ನುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಷಯವಾಗಿದೆ.
ಹಾವೇರಿ ಉಸ್ತುವಾರಿ ಬಗ್ಗೆ ಶಂಕರ್ ಮತ್ತು ಮುಖ್ಯಮಂತ್ರಿಗಳ ನಡುವೆ ಏನು ಮಾತುಕತೆ ನಡೆದಿದೆ ಗೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ. ನೂತನ ಸಚಿವರಿಗೂ ಜಿಲ್ಲಾ ಉಸ್ತುವಾರಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸಲಿದ್ದಾರೆ ಎಂದರು.