ಬೆಂಗಳೂರು: ನಟ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಚಿತ್ರದ ಪೋಸ್ಟರ್ ಮೇಲೆ ಸಹೋದರ ದಿ. ಪುನೀತ್ ರಾಜ್ಕುಮಾರ್ಗೆ ನಮನ ಸಲ್ಲಿಸಿರುವ ಬ್ಯಾನರ್ ಕಾಕತಾಳೀಯ ಎಂಬಂತೆ ಕಂಠೀರವ ಸ್ಟುಡಿಯೋ ಮುಂಭಾಗ ಕಂಡುಬಂತು.
ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿರುವ ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್ ರಾಜ್ಕುಮಾರ್ ಅಂತ್ಯಸಂಸ್ಕಾರದ ವಿಧಿವಿಧಾನ ನಡೆದ ಸಂದರ್ಭ, ಹೊರಭಾಗದಲ್ಲಿ ಕಳೆದ ಶುಕ್ರವಾರ ತೆರೆಕಂಡ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಚಿತ್ರದ ಪೋಸ್ಟರ್ ಹಾಕಲಾಗಿದೆ. ಈ ಪೋಸ್ಟರ್ ಮೇಲ್ಭಾಗದಲ್ಲಿ ಪುನೀತ್ಗೆ ನಮನ ಸಲ್ಲಿಸುವ ಬ್ಯಾನರ್ ಕಟ್ಟಿರುವುದು ಮನಕಲಕುವಂತಿದೆ.
ಡಾ.ರಾಜ್ಕುಮಾರ್ ಕುಟುಂಬದ ಹಿರಿಯ ಪುತ್ರ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಚಿತ್ರ ತೆರೆಕಂಡ ದಿನವೇ ಪುನೀತ್ ರಾಜ್ಕುಮಾರ್ ನಿಧನರಾಗಿದ್ದರು. ಪುನೀತ್ ದಿಢೀರ್ ನಿಧನದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನ ರದ್ದಾಗಿದೆ. ಸದ್ಯ ಇಡೀ ಕುಟುಂಬ ದುಃಖದ ಮಡುವಿನಲ್ಲಿದ್ದು ಈ ಒಂದು ದೃಶ್ಯ ಮತ್ತಷ್ಟು ನೋವು ನೀಡುತ್ತಿತ್ತು.
ಎರಡು ವರ್ಷಗಳ ಕೋವಿಡ್ ಆತಂಕ ಹಾಗೂ ನಿರ್ಬಂಧದ ಕಾರಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣದೆ ಕನ್ನಡ ಸೇರಿ ಭಾರತೀಯ ಚಿತ್ರರಂಗ ಮಂಕಾಗಿತ್ತು. ಮೊದಲ ಲಾಕ್ಡೌನ್ ಹಾಗೂ ಎರಡನೇ ಲಾಕ್ಡೌನ್ ನಂತರ ಅನ್ಲಾಕ್ ಆದಮೇಲೆ ತೆರೆಕಂಡ ಚಿತ್ರಗಳು ಕೊಂಚಮಟ್ಟಿನ ಯಶಸ್ಸು ಗಳಿಸಿದ್ದವು. ಆದರೆ ಎರಡನೇ ಅನ್ಲಾಕ್ ನಂತರ ಚಿತ್ರರಂಗದ ಪ್ರಮುಖರು ಸರ್ಕಾರದ ಮೇಲೆ ಸಾಕಷ್ಟು ಒತ್ತಡ ತಂದು ಪೂರ್ಣ ಆಸನ ವ್ಯವಸ್ಥೆ ಮೂಲಕ ಚಿತ್ರ ಪ್ರದರ್ಶನಕ್ಕೆ ಅವಕಾಶ ಪಡೆದಿದ್ದರು. ಈ ಅವಕಾಶ ದೊರಕಿದ ನಂತರವೇ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಬಿಡುಗಡೆಯಾಗಿತ್ತು. ಇದಾದ ಎರಡನೇ ವಾರದಲ್ಲಿಯೇ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಚಿತ್ರ ಬಿಡುಗಡೆಯಾಗಿದೆ. ಉತ್ತಮ ಪ್ರದರ್ಶನ ಕಾಣುತ್ತಿದ್ದ ಚಿತ್ರದ ಪೋಸ್ಟರ್ಗಳು ನಗರದೆಲ್ಲೆಡೆ ರಾರಾಜಿಸುತ್ತಿವೆ.
ಇದನ್ನೂ ಓದಿ: ಪುನೀತ್ ಸಮಾಧಿ ಮೇಲೆ ತುಳಸಿ ಗಿಡ ನೆಟ್ಟು ಪೂಜೆ