ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ಕುಟುಂಬಸ್ಥರು, ಗಣ್ಯಾತಿಗಣ್ಯರು, ಹಿತೈಷಿಗಳು ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಕಂಠೀರವ ಸ್ಟೇಡಿಯಂ ರವಾನಿಸಲಾಗಿದೆ. ಪಾರ್ಥಿವ ಶರೀರದ ಹೊತ್ತ ಆ್ಯಂಬುಲೆನ್ಸ್ ಜತೆಯಲ್ಲೇ ಮತ್ತೊಂದು ವಾಹನ ಮೂಲಕ ಪುನೀತ್ ರಾಜ್‌ಕುಮಾರ್ ಕುಟುಂಬ ಸದಸ್ಯರು ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ.
ನಟ ಸುದೀಪ್, ಯಶ್, ಸಾಧುಕೋಕಿಲ, ರವಿಶಂಕರ್ ಸೇರಿದಂತೆ ಬಹುತೇಕ ನಟ - ನಟಿಯರು, ಹಿರಿಯ ಪೋಷಕ ಕಲಾವಿದರು ಪುನೀತ್ ಅವರ ನಿವಾಸಕ್ಕೆ ಬಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಾರ್ವಜನಿಕರ ದರ್ಶನಕ್ಕಾಗಿ ಕಂಠೀರವ ಸ್ಟೇಡಿಯಂನಲ್ಲಿ ಸಕಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.