ಬೆಂಗಳೂರು: ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಫಲಿತಾಂಶ ಮೇ 19 ರಂದು ಪ್ರಕಟಗೊಂಡಿತು. ಇದರ ಬೆನ್ನಲ್ಲೇ ಇದೀಗ ಪಿಯು ಕಾಲೇಜುಗಳ ಮುಂದೆ ಅಡ್ಮಿಷನ್ ಗಾಗಿ ಜನಸಾಗರವೇ ಕಂಡು ಬರುತ್ತಿದೆ. ಕಳೆದ ಹತ್ತು ವರ್ಷಗಳ ನಂತರ ಎಸ್ಎಸ್ಎಲ್ಸಿ ದಾಖಲೆ ಫಲಿತಾಂಶ ಹಿನ್ನಲೆ ಈ ಬಾರಿ ಅಡ್ಮಿಷನ್ಗಳ ಸಂಖ್ಯೆ ಜಾಸ್ತಿ ಆಗಿದೆ. ಹೀಗಾಗಿ ಪಿಯು ಕಾಲೇಜುಗಳ ಮುಂದೆ ಪುಲ್ ಕ್ಯೂ ಇರುವುದು ಕಂಡು ಬಂದಿದೆ.
ಪಿಯು ಅಡ್ಮಿಷನ್ ಅಪ್ಲಿಕೇಶನ್ ಪಡೆಯಲು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿದ್ದು, ಮಲ್ಲೇಶ್ವರಂ ಪಿಯು ಕಾಲೇಜು, ಎಂಇಎಸ್ ಕಾಲೇಜು ಮುಂದೆ ಕ್ಯೂನಲ್ಲಿ ನಿಂತು ಪಿಯು ಅಪ್ಲಿಕೇಶನ್ ಫಾರಂ ಪಡೆಯುತ್ತಿದ್ದದ್ದು ಕಂಡುಬಂತು. ಇತ್ತ, ಡಿಮ್ಯಾಂಡ್ ಜಾಸ್ತಿ ಆಗಿರುವ ಹಿನ್ನೆಲೆ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದರೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟುಗಳು ಸಿಗುತ್ತೋ ಇಲ್ವೋ ಎಂಬ ಟೆನ್ಷನ್ನಲ್ಲಿ ವಿದ್ಯಾರ್ಥಿಗಳಿದ್ದರು. ಉತ್ತಮ ಪಿಯು ಕಾಲೇಜುಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಪರದಾಟವಂತೂ ಈಗ ಶುರುವಾಗಿದೆ.
ಕಳೆದ ವರ್ಷ ಪದವಿ ಕೋರ್ಸ್ಗೆ ಹೆಚ್ಚಿದ್ದ ಡಿಮ್ಯಾಂಡು: ಕಳೆದ ಶೈಕ್ಷಣಿಕ ವರ್ಷಕ್ಕೆ ಸಾಂಕ್ರಾಮಿಕ ಕೊರೊನಾ ಸೋಂಕಿನಿಂದ ಕಾಲಕಾಲಕ್ಕೆ ನಡೆಯಬೇಕಿದ್ದ ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಅದರಲ್ಲೂ ಒಂದು ದೇಶದ ಅಭಿವೃದ್ಧಿಗೆ ಸಾಕ್ಷಿಯಾಗುವುದೇ ಅಲ್ಲಿನ ಆರೋಗ್ಯ ಹಾಗೂ ಶಿಕ್ಷಣ. ಹೀಗಿರುವಾಗ ಕೊರೊನಾ ಸೋಂಕು ಹರಡುವಿಕೆಯಿಂದ ಹೆಚ್ಚು ಹೊಡೆತಕ್ಕೆ ಒಳಗಾಗಿದ್ದು ಶೈಕ್ಷಣಿಕ ವ್ಯವಸ್ಥೆ.
ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯು ರದ್ದಾಗಿತ್ತು. ಎಸ್ಎಸ್ಎಲ್ಸಿ ಹಾಗೂ ಮೊದಲ ಪಿಯುಸಿ ಕಲಿಕೆಯ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಗ್ರೇಡ್ ನೀಡಿ ಪಾಸ್ ಮಾಡಲಾಗಿತ್ತು. ಹೀಗೆ, ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳ ತೇರ್ಗಡೆಯಿಂದ ಕಳೆದ ವರ್ಷ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಹೆಚ್ಚಳವಾಗಿತ್ತು. ಸಾಮಾನ್ಯವಾಗಿ ನಾಲ್ಕು ಲಕ್ಷದಷ್ಟು ವಿದ್ಯಾರ್ಥಿಗಳು ಪಾಸ್ ಔಟ್ ಆಗಿ ಪದವಿ ಕಾಲೇಜು ಸೇರುತ್ತಿದ್ದ ಜಾಗದಲ್ಲಿ. ಆರೂವರೆ ಲಕ್ಷ ವಿದ್ಯಾರ್ಥಿಗಳು ಸಹ ಮಾಸ್ ಪಾಸ್ ಆಗಿದ್ದರು.
ಹಾಗೇ 2020-21ನೇ ಸಾಲಿನಲ್ಲಿ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಮಾದರಿಯನ್ನು ಬದಲಾಯಿಸಲಾಗಿತ್ತು. ಆರು ದಿನಗಳ ಕಾಲ ನಡೆಯುತ್ತಿದ್ದ ಪರೀಕ್ಷೆಯನ್ನು ಎರಡು ದಿನಗಳಿಗೆ ಬಹು ಆಯ್ಕೆ ಮಾದರಿ ಪ್ರಶ್ನೆಗಳೊಂದಿಗೆ ಪರೀಕ್ಷೆ ನಡೆದಿತ್ತು. ಆಗಲೂ ಪರೀಕ್ಷೆ ಫಲಿತಾಂಶ 99.9 ರಷ್ಟು ಬಂದಿತ್ತು. ಹೀಗಾಗಿ ಆಗಲೂ ಪಿಯು ದಾಖಲಾತಿಗೆ ಬೇಡಿಕೆ ಹೆಚ್ಚಿದ್ದವು. ಈ ಸಲ ಪೂರ್ಣ ಪ್ರಮಾಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿದ್ದು, ಮೌಲ್ಯಮಾಪನ ವಿದ್ಯಾರ್ಥಿ ಸ್ನೇಹಿಯಾಗಿ ಶಿಕ್ಷಣ ಇಲಾಖೆ ನೆರವೇರಿಸಿದೆ.
ಕಳೆದ ಹತ್ತು ವರ್ಷಗಳ ದಾಖಲೆಯನ್ನು ಫಲಿತಾಂಶ ಉಡೀಸ್ ಮಾಡಿದೆ. ಇದರ ಫಲವಾಗಿ ಔಟ್ ಆಫ್ ಔಟ್ ಅಂಕವನ್ನು ಬರೋಬ್ಬರಿ 145 ವಿದ್ಯಾರ್ಥಿಗಳು ಪಡೆದು ಕೊಂಡಿದ್ದಾರೆ. ಹೀಗಾಗಿ ಈ ಸಲವೂ ಪಿಯು ಕಾಲೇಜುಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಇದಕ್ಕೆ ತಕ್ಕಂತೆ ಪಿಯು ಬೋರ್ಡ್ ಯಾವ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳುತ್ತೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಅಸ್ಸೋಂನಲ್ಲಿ ನಿಲ್ಲದ ಪ್ರವಾಹ ಸಂಕಷ್ಟ: ಸಾವಿನ ಸಂಖ್ಯೆ 14ಕ್ಕೆ ಏರಿಕೆ