ಬೆಂಗಳೂರು: ರಿಯಾಯಿತಿ ಪಡೆದು ಆಸ್ತಿ ತೆರಿಗೆ ಪಾವತಿಸಲು ಇಂದೇ ಕೊನೆಯ ದಿನವಾಗಿದೆ. ಮೇ 30ರವರೆಗೆ ಶೇಕಡಾ 5ರಷ್ಟು ರಿಯಾಯಿತಿ ಬಳಸಿಕೊಂಡು ಸಿಲಿಕಾನ್ ಸಿಟಿ ಜನ ತೆರಿಗೆ ಪಾವತಿಸಿದ್ದಾರೆ. ಹೀಗೆ ಪಾವತಿಸಿದ ಒಟ್ಟು ತೆರಿಗೆ 1,326.48 ಕೋಟಿಯಷ್ಟಾಗಿದೆ.
ಲಾಕ್ಡೌನ್ ನಡುವೆಯೂ ಜನರಿಂದ ಬಿಬಿಎಂಪಿ ಜವಾಬ್ದಾರಿಯಿಂದ ಸರ್ಕಾರದ ಆಡಳಿತಕ್ಕೆ ನೆರವಾಗಲು ತೆರಿಗೆ ಪಾವತಿಸಿದ್ದಾರೆ ಎಂದು ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ತಿಳಿಸಿದರು.
ಹೆಚ್ಚಿನ ತೆರಿಗೆದಾರರು ಆನ್ಲೈನ್ ಮೂಲಕವೇ ತೆರಿಗೆ ಪಾವತಿಸಿದ್ದು, 727.83 ಕೋಟಿ ರೂ. ಸಂಗ್ರಹವಾಗಿದೆ. ಬ್ಯಾಂಕ್ ಚಲನ್ ಮೂಲಕ 598.65 ಕೋಟಿ ರೂ. ಸಂಗ್ರಹವಾಗಿದೆ. ಏಪ್ರಿಲ್ ತಿಂಗಳಲ್ಲಿ 300 ಕೋಟಿ ರೂ. ಸಂಗ್ರಹವಾಗಿತ್ತು. ವಿನಾಯಿತಿ ವಿಸ್ತರಿಸಿದ ಕಾರಣ ಮೇ ತಿಂಗಳಲ್ಲಿ 1,026 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇಂದು ತೆರಿಗೆ ಪಾವತಿಗೆ ಕಡೆಯ ದಿನವಾಗಿದ್ದು, ಎಷ್ಟು ಆಸ್ತಿ ತೆರಿಗೆ ಸಂಗ್ರಹವಾಗಲಿದೆ ಎಂದು ಕಾದುನೋಡಬೇಕಿದೆ.