ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಕಂಟ್ರೋಲ್ ಮೀರಿ ಹೋಗುತ್ತಿದ್ದು, ಇದನ್ನ ತಡೆಯಲು ಸರ್ಕಾರ ಇದೀಗ ಹಲವು ಅಸ್ತ್ರಗಳನ್ನ ಸಿದ್ದಪಡಿಸಿದೆ. ಗುಂಪು ಸೇರುವ ಚಟುವಳಿಕೆಗಳಿಗೆ ಬ್ರೇಕ್ ಹಾಕಿದ್ದು, ಕಠಿಣ ಟಫ್ ರೂಲ್ಸ್ ಜಾರಿ ಮಾಡಿದೆ. ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿ ಮಾಡುವುದರ ಜೊತೆಗೆ ಸಾರಿಗೆ ಬಸ್ ಗಳಲ್ಲಿ ಶೇ.50 ರಷ್ಟು ಮಾತ್ರ ಆಸನ ಭರ್ತಿ ಮಾಡಲು ಸೂಚನೆ ನೀಡಿದೆ.
ಈಗಾಗಲೇ ಕೊರೊನಾ ಮೊದಲ ಅಲೆಯಲ್ಲಿ ಲಾಕ್ಡೌನ್ ಮಾಡಿದಾಗ ಹಲವು ಖಾಸಗಿ ಬಸ್ಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದರು. ಬಳಿಕ ಹಂತ ಹಂತವಾಗಿ ಅನ್ಲಾಕ್ ಮಾಡಿದ ಸಂದರ್ಭದಲ್ಲೂ ಶೇಕಡ 50.ರಷ್ಟು ಆಸನಕ್ಕೆ ಅವಕಾಶ ನೀಡಿದಾಗ, ಬಸ್ಗಳ ಓಡಾಟವನ್ನೇ ನಿಲ್ಲಿಸಿ ಬಿಟ್ಟಿದ್ದರು. ಇದೀಗ ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದ್ದು, ಎಲ್ಲ ಸಾರಿಗೆ ಬಸ್ಗಳಲ್ಲಿ ಶೇ. 50 ರಷ್ಟು ಆಸನಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಈ ಆದೇಶಕ್ಕೆ ಖಾಸಗಿ ಬಸ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಶೇ.50 ರಷ್ಟು ಆಸನಗಳಲ್ಲಿ ಕಾರ್ಯಾಚರಣೆ ಮಾಡಿದರೆ ಬಹಳ ನಷ್ಟವಾಗುತ್ತೆ. ಡಿಸೇಲ್ ಬೆಲೆ ಕೂಡ ಗಗನಕ್ಕೇರಿದ್ದು ಇಂತಹ ಸಂದರ್ಭದಲ್ಲಿ ಕಡಿಮೆ ಪ್ರಯಾಣಿಕರನ್ನ ಹೊತ್ತೊಯ್ದರೆ ಯಾವುದೇ ಲಾಭ ಇರೋದಿಲ್ಲ. ಕಳೆದ ವರ್ಷ ಸರ್ಕಾರ ಶೇ. 50 ರಷ್ಟು ಅವಕಾಶ ನೀಡಿದ ಕಾರಣದಿಂದ ಹಲವು ಜಿಲ್ಲೆಗಳಲ್ಲಿ ಬಸ್ ನಿಲ್ಲಿಸಲಾಗಿತ್ತು. ಅಂತಾರೆ ಖಾಸಗಿ ಬಸ್ ಮಾಲೀಕರಾದ ಬಾಲ ಕೃಷ್ಣ.
ಸರ್ಕಾರ ಯಾವುದೇ ಆದೇಶ ಮಾಡುವ ಮುನ್ನ ಯೋಚನೆ ಮಾಡಬೇಕು. ಕೋವಿಡ್ ನಿಯಂತ್ರಣಕ್ಕೆ ಅಂತ ಈ ರೀತಿ ನಿಯಮಗಳನ್ನ ಮಾಡಿದರೆ ಜನರು ಬಸ್ ಇಲ್ಲ ಅಂತ ಆಟೋ, ಟಂಟಂ ಗಾಡಿಗಳ ಮೊರೆ ಹೋಗ್ತಾರೆ. ಆಗ ಒಂದೇ ಆಟೋದಲ್ಲಿ ಹತ್ತಾರು ಜನರನ್ನ ತುಂಬಿಕೊಂಡು ಹೋಗ್ತಾರೆ. ಅನಿರ್ವಾಯವಾಗಿ ಪ್ರಯಾಣಿಕರು ಹೋಗಬೇಕಾಗುತ್ತದೆ. ಇದರಿಂದ ಇನ್ನಷ್ಟು ಸೋಂಕು ಹರಡಲು ದಾರಿ ಮಾಡಿಕೊಟ್ಟಂತೆ ಆಗೋದಿಲ್ವಾ ಅಂತ ಪ್ರಶ್ನೆ ಮಾಡಿದರು.
ಸ್ಟೇಜ್ ಕ್ಯಾರೇಜ್ ಬಸ್ಗಳಿಗೆ ಪೂರ್ತಿ ಆಸನಗಳ ಕಾರ್ಯಾಚರಣೆಗೆ ಅವಕಾಶ ಕೊಡಬೇಕು. ಅನ್ಯ ರಾಜ್ಯಕ್ಕೆ ತೆರಳುವ ಬಸ್ಗಳಿಗೆ ಶೇ 50 ರಷ್ಟು ಆಸನದ ನಿಯಮ ಇರಲಿ ಅಂತ ಮನವಿ ಮಾಡಿದರು.
ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಅನಿರ್ವಾಯ
ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸಂಚಾರಕ್ಕೆ ಕೋವಿಡ್ ನಿಯಂತ್ರಣದ ಹೊಸ ಮಾರ್ಗಸೂಚಿಯಲ್ಲಿ ನಿಷೇಧ ವಿಧಿಸಿಲ್ಲ ಅಂತ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದಾರೆ. ಆದರೆ, ಸರ್ಕಾರಿ- ಖಾಸಗಿ ಬಸ್ಸುಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶೇ.50 ರಷ್ಟು ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ನೀಡಲಾಗಿದೆ. ಪ್ರಯಾಣಿಕರು ವಾಹನಗಳಲ್ಲಿ ಸಂಚರಿಸುವ ಸಮಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಪ್ರಯಾಣಿಕರು ಕೋವಿಡ್ನ ಗಂಭೀರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಅಂತ ಮನವಿ ಮಾಡಿದರು.
ನಿಗಮಗಳಿಂದ ಹಲವು ಕ್ರಮ
ಕೋವಿಡ್ ನಿಯಂತ್ರಣಕ್ಕೆ ಏಪ್ರಿಲ್ 21 ರಿಂದ ಮೇ 5 ರ ವರೆಗೆ ಜಾರಿಗೆ ಬರುವಂತೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಬಸ್ಗಳಲ್ಲಿ ಎರಡು ಆಸನಗಳು ಇದ್ದರೆ ಒಬ್ಬರು ಪ್ರಯಾಣಿಕರಿಗೆ ಕೂರಲು ಮಾತ್ರ ಅವಕಾಶ ಕಲ್ಪಿಸುವುದು. ಮೂರು ಆನಸದಲ್ಲಿ ಮಧ್ಯದಲ್ಲಿ ಖಾಲಿ ಇರುವಂತೆ ನೋಡಿಕೊಳ್ಳುವುದು. ಪ್ರಯಾಣಿಕರ ಜನಸಂದಣಿ ಅನುಗುಣವಾಗಿ ಬಸ್ಗಳ ಕಾರ್ಯಾಚರಣೆ ಮಾಡುವುದು. ಚಾಲನಾ ಸಿಬ್ಬಂದಿ ಹಾಗೂ ಪ್ರಯಾಣಿಕರು ಕಡ್ಡಾಯ ಮಾಸ್ಕ್ ಧರಿಸುವುದು, ಈ ಎಲ್ಲ ಮಾರ್ಗಸೂಚಿಯನ್ನ ಕಡ್ಡಾಯವಾಗಿ ಪಾಲಿಸುವುದು.