ಬೆಂಗಳೂರು: ಡಾ.ರಾಜ್‌ಕುಮಾರ್ ಆದರ್ಶಗಳನ್ನು ಪಾಲಿಸಿಕೊಂಡು ಬರುತ್ತಿದ್ದ ಪುನೀತ್ ರಾಜ್‌ಕುಮಾರ್, ತಾನೊಬ್ಬ ಸೂಪರ್‌ಸ್ಟಾರ್ ಆಗಿದ್ದರೂ ಕೂಡಾ ಯಾವ ರಾಜಕೀಯ ಪಕ್ಷದ ಜೊತೆಗೂ ಗುರುತಿಸಿಕೊಂಡಿರಲಿಲ್ಲ. ತಂದೆಯಂತೆ ಅಪ್ಪು ಕೂಡ ರಾಜಕೀಯದಿಂದ ದೂರ ಉಳಿದಿದ್ದರು.
ಅಷ್ಟೆ ಅಲ್ಲ, ಒಂದು ದಿನವೂ ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡಿದವರಲ್ಲ. ಆದರೆ ಎಲ್ಲಾ ಪಕ್ಷದ ರಾಜಕೀಯ ವ್ಯಕ್ತಿಗಳ ಜೊತೆ ಪುನೀತ್‌ಗೆ ಒಳ್ಳೆಯ ಬಾಂಧವ್ಯವಿತ್ತು. ರಾಜಕೀಯಕ್ಕೆ ಯಾವುದೇ ಕಾರಣಕ್ಕೂ ಬರುವುದಿಲ್ಲ ಅಂತಾ ಅಂದುಕೊಂಡಿದ್ದ ಪುನೀತ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರೇ ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡಿದ್ದರಂತೆ. ಇಂತಹ ಅಚ್ಚರಿಯ ವಿಷಯವನ್ನು ಪುನೀತ್ ರಾಜ್‌ಕುಮಾರ್ ಅವರನ್ನು ಬಾಲ್ಯದಿಂದ ನೋಡಿಕೊಂಡು ಬಂದಿರುವ ಹಾಗೂ ವಜ್ರೇಶ್ವರಿ ಕುಮಾರ್ ಅಂತಾನೇ ಕರೆಯಿಸಿಕೊಂಡಿರುವ ಎನ್.ಎಸ್.ರಾಜಕುಮಾರ್ ತಿಳಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಕರೆದುಕೊಂಡು ಬರಬೇಕು ಎಂದು ಬಿಜೆಪಿ ನಾಯಕರು ಸಾಕಷ್ಟು ಪ್ರಯತ್ನಪಟ್ಟಿದ್ದರು ಎಂದು ಎನ್.ಎಸ್.ರಾಜಕುಮಾರ್ ಈಟಿವಿ ಭಾರತದ ಜೊತೆ ಹೇಳಿಕೊಂಡರು.
ಪುನೀತ್ ಅವರಿಗೆ ರಾಜಕೀಯಕ್ಕೆ ಬರುವ ಉದ್ದೇಶ ಯಾವಾಗಲೂ ಇರಲಿಲ್ಲ. ಈ ವಿಚಾರ ನನಗೆ ಗೊತ್ತಿತ್ತು. ಒಮ್ಮೆ ನಿರ್ಮಾಪಕ ಎಸ್.ಬಿ.ಬಾಬು ಅವರಿಂದ ಬಿಜೆಪಿ ಮುಖಂಡರಾದ ಆಶಿಶ್ ಹಾಗೂ ಪಿವಿಎಸ್ ಶರ್ಮಾ ಅಪ್ಪು ಅವರನ್ನು ಭೇಟಿ ಮಾಡಬೇಕೆಂದು ನನ್ನನ್ನು ಭೇಟಿ ಮಾಡಿದ್ದರು ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರನ್ನು ಪುನೀತ್‌ಗೆ ಭೇಟಿ ಮಾಡಿಸಿದ್ದ ಎನ್‌ಎಸ್‌ಆರ್
ಪುನೀತ್ ಒಪ್ಪಿಕೊಳ್ಳಲ್ಲ ಅಂತಾ ಆಶಿಶ್ ಅವರಿಗೆ ನಾನು ಹೇಳಿದ್ದೆ. ಆದರೂ ಒಮ್ಮೆ ಭೇಟಿ ಮಾಡಿಸಿ ಅಂತಾ ಹೇಳಿದರು. ಆಗ ಸದಾಶಿವನಗರದ ಅಪ್ಪು ಅವರ ಮನೆಗೆ ಬಿಜೆಪಿ ಮುಖಂಡರಾದ ಆಶಿಶ್ ಹಾಗೂ ಪಿವಿಎಸ್ ಶರ್ಮಾ ಅವರನ್ನು ಕರೆದುಕೊಂಡು ಹೋಗಿ ಭೇಟಿ ಮಾಡಿಸಿದೆ. ಈ ವೇಳೆ ಇಬ್ಬರು ನಾಯಕರು ರಾಜಕೀಯಕ್ಕೆ ಬರುವಂತೆ ಆಹ್ವಾನ ಕೊಟ್ಟರು. ಪುನೀತ್ ನಗುತ್ತಲೇ ನಾನು ನಿಮಗೆ, ಟೀ ಹೇಳಿ ಬರ್ತೀನಿ ಅಂತಾ ಒಳಗೆ ಹೋಗಿ ಬಂದ ಬಳಿಕ ರಾಜಕೀಯ ವಿಚಾರ ಬಿಟ್ಟು ಅವರನ್ನು ಮಾತನಾಡಿಸಿ ಕಳುಹಿಸಿಕೊಟ್ಟಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಈ ಸಭೆಯ ಬಳಿಕ ಪುನೀತ್ ರಾಜ್‌ಕುಮಾರ್, ಪತ್ನಿ ಅಶ್ವಿನಿ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಬಂದಿತ್ತು. ಆಗಲೂ ಕೂಡ ಪುನೀತ್ ಅವರು ಮೋದಿ ಅವರನ್ನು ಭೇಟಿ ಮಾಡಲು ಒಪ್ಪಿಕೊಂಡಿರಲಿಲ್ಲ. ಎನ್.ಎಸ್.ರಾಜಕುಮಾರ್ ಮಾತಿಗೆ ಬೆಲೆ ಕೊಟ್ಟು ಪುನೀತ್, ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು.
ಇದು ದೊಡ್ಡ ಚರ್ಚೆ ಆಗುತ್ತೆ ಅಂತಾ ಹೇಳಿದ್ದ ಪುನೀತ್ ಅವರು ಪ್ರಧಾನಿ ಭೇಟಿ ವೇಳೆ ತಂದೆ ರಾಜ್‌ಕುಮಾರ್ ಬಯೋಫಿಕ್ ಪುಸ್ತಕವನ್ನು ಕೊಡುವ ಮೂಲಕ ಭೇಟಿ ಮಾಡಿದ್ದರು ಅಂತಾ ಕುಮಾರ್ ಹೇಳುತ್ತಾರೆ. ಅಷ್ಟೇ ಅಲ್ಲ, ಮೋದಿ ಅವರನ್ನು ಭೇಟಿ ಮಾಡಿ ತಕ್ಷಣವೇ ಪುನೀತ್ ಪತ್ನಿ ಅಶ್ವಿನಿ ಅಲ್ಲಿಂದ ಹೊರಡುತ್ತಾರೆ. ಮೋದಿಯವರ ವಿಮಾನದ ಸಮಯ ಲೇಟಾಗುತ್ತೆ ಅಂದಾಗಾಲೂ ಸ್ವತಃ ಮೋದಿಯವರೇ ಪುನೀತ್‌ರನ್ನು ಕರೆಸಿಕೊಂಡು 7 ನಿಮಿಷ ಮಾತನಾಡಿದ್ದರಂತೆ.
'ನಿಮ್ಮಂಥ ಯಂಗ್ ಸ್ಟಾರ್‌ಗಳು ರಾಜಕೀಯಕ್ಕೆ ಬರಬೇಕು'
ನಿಮ್ಮಂತ ಯಂಗ್ ಸ್ಟಾರ್‌ಗಳು ರಾಜಕೀಯಕ್ಕೆ ಬರಬೇಕೆಂದು ಪುನೀತ್ ಅವರಿಗೆ ಮೋದಿಯವರು ಆಫರ್ ಕೊಟ್ಟರಂತೆ. ಮೋದಿ ಅವ್ರ ಜೊತೆ ಮಾತನಾಡಿ ಹೊರಗಡೆ ಬಂದ ಪುನೀತ್, ಎನ್.ಎಸ್.ರಾಜಕುಮಾರ್ ಜೊತೆ ಮೋದಿ ಸಾರ್ ರಾಜಕೀಯಕ್ಕೆ ಬರುವಂತೆ ಹೇಳಿದರು. ಆದ್ರೆ ನಾನು ಯಾವತ್ತೂ ರಾಜಕೀಯಕ್ಕೆ ಹೋಗಲ್ಲ ಅಂತಾ ಹೇಳಿದ್ದರಂತೆ. ಇಂದು ನಮ್ಮ ಬಾಸ್ ಇಲ್ಲ. ಆದರೆ ಅವರು ಮಾಡಿದ ಸಮಾಜಮುಖಿ ಕೆಲಸಗಳು ಹಾಗೂ ಪ್ರತಿಯೊಬ್ಬರೂ ಚೆನ್ನಾಗಿರಬೇಕು ಎಂದು ಹೇಳುತ್ತಿದ್ದ ಮಾತುಗಳು ಯಾವಾಗಲೂ ಕಾಡುತ್ತಿವೆ ಎಂದು ಎನ್.ಎಸ್.ರಾಜಕುಮಾರ್ ಭಾವುಕರಾದರು.