ಬೆಂಗಳೂರು: ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಅವಶ್ಯಕ ಸಾಮಗ್ರಿಗಳು ಹಾಗೂ ಬ್ಯಾಲೆಟ್ ಬಾಕ್ಸ್ ದೆಹಲಿಯ ಭಾರತ ಚುನಾವಣಾ ಆಯೋಗದ ಕೇಂದ್ರ ಕಚೇರಿಯಿಂದ ವಿಧಾನಸೌಧಕ್ಕೆ ತಲುಪಿದ್ದು, ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿವೆ. ರಾಜ್ಯದ ಬ್ಯಾಲೆಟ್ ಜರ್ನಿಯ ನೇತೃತ್ವವನ್ನು ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ ವಹಿಸಿದ್ದು, ಮಂಗಳವಾರ ಸಂಜೆ ನವದೆಹಲಿಯಿಂದ ನಿರ್ಗಮಿಸಿ ರಾತ್ರಿ 8:15ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು. ವಿಶೇಷ ಬ್ಯಾಲೆಟ್ ಜರ್ನಿಯ ಮುಖಾಂತರ ರಾಜ್ಯಕ್ಕೆ ಆಗಮಿಸಿದ ಮತದಾನದ ಸಾಮಗ್ರಿಗಳನ್ನು ರಾತ್ರಿ 9 ಗಂಟೆಗೆ ವಿಧಾನಸೌಧ ತಲುಪಿವೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹಾಗೂ ಸಹಾಯಕ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರ ಸಮ್ಮುಖದಲ್ಲಿ ಇದಕ್ಕಾಗಿ ಮೀಸಲಿಟ್ಟಿರುವ ಕೊಠಡಿ ಸಂಖ್ಯೆ 108 ರಲ್ಲಿ (Strong Room) ಶೇಖರಿಸಿಡಲಾಯಿತು. ಮಾಧ್ಯಮದೊಂದಿಗೆ ಮಾತನಾಡಿದ ಸಹಾಯಕ ಚುನಾವಣಾಧಿಕಾರಿಗಳು, "ರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯದ ಒಟ್ಟು 224 ಶಾಸಕರು + ಸಂಸತ್ ಸದಸ್ಯರು ಇಲ್ಲಿ ಮತ ಚಲಾಯಿಸಲಿದ್ದಾರೆ. ಉಳಿದ ರಾಜ್ಯದ ಸಂಸದರು ಸಂಸತ್ನಲ್ಲಿ ಮತ ಚಲಾಯಿಸಲಿದ್ದಾರೆ. ಒಬ್ಬರು ಅನಾರೋಗ್ಯದ ಕಾರಣಕ್ಕಾಗಿ ಇಲ್ಲಿಯೇ ಮತ ಚಲಾಯಿಸಲು ಮನವಿ ಮಾಡಿಕೊಂಡಿರುವ ಕಾರಣಕ್ಕಾಗಿ ಚುನಾವಣಾ ಆಯೋಗ ಅನುಮತಿ ನೀಡಿದೆ" ಎಂದು ಹೇಳಿದರು.
ಇದನ್ನೂ ಓದಿ: ರಾಷ್ಟ್ರೀಯ ಲಾಂಛನ ವಿವಾದ: ಹೊಸ ಸಂಸತ್ ಭವನದಲ್ಲಿನ ಸಿಂಹಗಳ ಬಗ್ಗೆ ಯಾಕಿಷ್ಟು ಪ್ರಶ್ನೆ?