ಬೆಂಗಳೂರು: ಮಹಾರಾಷ್ಟ್ರ ಸಿಎಂ 50 ವರ್ಷ ಹಿಂದಿನ ವಿಡಿಯೋ ಬಿಡುಗಡೆ ಮಾಡಿ ಕಾರವಾರ ಸಹಕಾರಿ ಬ್ಯಾಂಕ್ ಮರಾಠಿ ಭಾಷೆ ಬಳಕೆ ಮಾಡಿರುವುದು, ಬೆಳಗಾವಿ ಬ್ರಿಡ್ಜ್ ಬಳಿ ಮರಾಠಿ ಭಾಷೆ ಬಳಕೆ ಬಗ್ಗೆ ಸಾಕ್ಷಿ ಬಿಡುಗಡೆ ಮಾಡಿದ ಬೆನ್ನಲ್ಲೇ ನಗರದ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಓದಿ: ಮತ್ತೆ ಉದ್ಧಟತನ ಮೆರೆದ ಉದ್ಧವ್ ಠಾಕ್ರೆ: 50 ವರ್ಷದ ಹಿಂದಿನ ಸಾಕ್ಷ್ಯಚಿತ್ರದ ವಿಡಿಯೋ ಅಪ್ಲೋಡ್!
ಇನ್ನೊಂದೆಡೆ ಮಹಾದಾಯಿ ನೀರು ಹಂಚಿಕೆಯಲ್ಲಿ ರಾಜಿ ಇಲ್ಲ ಎಂದು ಗೋವಾ ಸಿಎಂ ನಿಯೋಗ ಹೊರಡುವುದಾಗಿ ಹೇಳಿರುವ ವಿಚಾರವೂ ಕನ್ನಡಪರ ಸಂಘಟನೆಗಳ ಸಿಟ್ಟಿಗೆ ಕಾರಣವಾಗಿವೆ. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇವೆ. ನಿಮ್ಮ ಕುಚೇಷ್ಟೆ ಬಿಟ್ಟುಬಿಡಿ. ಹಳೇ ವಿಡಿಯೋ, ಸಿಡಿ ತೋರಿಸಿ ಕನ್ನಡಿಗರ ಭೂಮಿಯನ್ನು ಕಬಳಿಸಲು ಸಾಧ್ಯವಿಲ್ಲ. ಒಂದು ಹಿಡಿ ಮಣ್ಣನ್ನೂ ಮುಟ್ಟಲೂ ಸಾಧ್ಯವಿಲ್ಲ ಎಂದಿದ್ದಾರೆ.
ಸೊಲ್ಲಾಪುರ, ಮುಂಬೈ ನಗರಗಳಲ್ಲಿ ಅನೇಕ ಕನ್ನಡಿಗರಿದ್ದಾರೆ. ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡಿನ ವಿಸ್ತಾರ ಇದೆ. ಹೀಗಾಗಿ ನಿಮ್ಮ ರಾಜ್ಯದ ಭಾಗವನ್ನೂ ಬಿಟ್ಟುಕೊಡಿ ಅಂತ ಹೇಳಬಹುದಾಗಿದೆ. ಕೇಂದ್ರಕ್ಕೆ ಸರ್ವಪಕ್ಷ ನಿಯೋಗವನ್ನು ತೆಗೆದುಕೊಂಡು ಹೋಗಬಹುದಾಗಿದೆ. ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ಗೆ ಮನವಿ ಮಾಡಬೇಕಾಗುತ್ತದೆ.
ಕನ್ನಡಿಗರು ವಿಶಾಲ ಹೃದಯದವರು. ಎಲ್ಲಾ ಭಾಷೆಯ ಶಾಲೆ ತೆರೆಯಲು ಕಾರವಾರ, ನಿಪ್ಪಾಣಿ, ಬೆಳಗಾವಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ಕನ್ನಡಿಗರ ತಂಟೆಗೆ ಬರಬಾರದು. ಸರ್ಕಾರ ಸರ್ವಪಕ್ಷದ ನಿಯೋಗ ಕರೆದುಕೊಂಡು ಹೋಗಿ ಕಳಸಾ ಬಂಡೂರಿ, ಮಹಾದಾಯಿ ಯೋಜನೆ ಜಾರಿಗೆ ತರಬೇಕು. ರಾಜ್ಯ ಸರ್ಕಾರವೂ ಗಡಿ ಹಾಗೂ ಕನ್ನಡದ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿ, ನೆಲ, ಜಲದ ವಿಚಾರವಾಗಿ ರಾಜ್ಯದ ಸಂಸದರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕನ್ನಡಪರ ಸಂಘಟನೆಗಳೂ ನಮ್ಮ ಜವಾಬ್ದಾರಿಗೆ ಸದಾ ಬದ್ಧರಾಗಿರುತ್ತೇವೆ ಎಂದಿದ್ದಾರೆ.