ಬೆಂಗಳೂರು: ಸಂಸದ ಪ್ರತಾಪ್ ಸಿಂಹ ವಿರುದ್ಧ ನಟ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ ಹೂಡಿದ್ದ ಪ್ರಕರಣದ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶ ರಾಮಚಂದ್ರ ಹುದ್ದಾರ್ ಪೀಠದಲ್ಲಿ ನಡೆಯಿತು.
ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ 1 ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಇಬ್ಬರು ಸೆಲೆಬ್ರಿಟಿಗಳು ಸಮಾಜಕ್ಕೆ ಮಾದರಿಯಾಗಿರಬೇಕು. ರಾಜ್ಯದಲ್ಲಿ ಏನಾಗುತ್ತಿದೆ ಎಂದು ನಿಮಗೆ ಗೊತ್ತಿದೆ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಹಲವು ಜಿಲ್ಲೆಗಳಲ್ಲಿ ಜನರಿಗೆ ತಿನ್ನಲು ಊಟ ಕೂಡ ಇಲ್ಲದ ಸ್ಥಿತಿ ಇದೆ. ಮಾಧ್ಯಮಗಳಲ್ಲಿ ದೃಶ್ಯಗಳನ್ನು ನೋಡಿದರೆ ಕಣ್ಣೀರು ಬರುತ್ತೆ ಎಂದು ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ಪ್ರವಾಹ ಪೀಡಿತ ಪ್ರದೇಶಗಳ ಕಡೆ ಗಮನ ಹರಿಸಿ ಎಂದು ಪ್ರತಾಪ್ ಸಿಂಹ ಹಾಗೂ ಪ್ರಕಾಶ್ ರೈಗೆ ಸಲಹೆ ನೀಡಿದ್ರು.
ಹಾಗೆಯೇ ಪ್ರತಾಪ್ ಸಿಂಹ ಮತ್ತು ಪ್ರಕಾಶ್ ರೈ ರಾಜಿಯಲ್ಲಿ ಗೊಂದಲ ಇದೆ. ಮುಂದಿನ ವಿಚಾರಣೆ ವೇಳೆ ಎಲ್ಲವನ್ನು ಬಗೆಹರಿಸುವುದಾಗಿ ಕೋರ್ಟ್ ತಿಳಿಸಿ ವಿಚಾರಣೆ ಮುಂದೂಡಿದೆ.