ಬೆಂಗಳೂರು: ನಗರದಲ್ಲಿ ಕೊರೊನಾ ತಲ್ಲಣ ಸೃಷ್ಟಿಸಿರುವ ನಡುವೆಯೇ ಹೊಸ ಹೊಸ ದಂಧೆಗಳು ತಲೆ ಎತ್ತುತ್ತಿವೆ. ಸೋಂಕು ಪರೀಕ್ಷಾ ವಿಭಾಗದಲ್ಲಿ 900 ರೂ. ಹಣ ಪಡೆದು ಬೇಕಾದವರಿಗೆ ಕೋವಿಡ್ ನೆಗೆಟಿವ್ ಇದ್ದರೂ ಪಾಸಿಟಿವ್ ವರದಿ ಕೊಡುತ್ತಿದ್ದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದ ಸ್ವಾಬ್ ಕಲೆಕ್ಟರ್ ನರೇಶ್ ಮತ್ತು ಪವನ್ ಎಂಬುವರನ್ನು ವಜಾ ಮಾಡಲಾಗಿದೆ. ಯಶವಂತಪುರ ರೈಲ್ವೇ ನಿಲ್ದಾಣ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಆರೋಪಿಗಳ ವಿರುದ್ಧ ಡಾ.ಸುನೀತಾ ದೂರು ನೀಡಿದ್ದು, ಸದ್ಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸ್ವಾಬ್ ಕಲೆಕ್ಟರ್ ಹಾಗೂ ಡೇಟಾ ಆಪರೇಟರ್ ಆಗಿದ್ದ ಇವರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸೀಲನ್ನು ದುರುಪಯೋಗ ಪಡಿಸೊಕೊಂಡು ಅಕ್ರಮವಾಗಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.