ಬೆಂಗಳೂರು: ಪ್ರವಾದಿ ಮಹಮ್ಮದ್ ಕುರಿತು ಬಿಜೆಪಿ ನಾಯಕಿ ನೂಪುರ್ ಶರ್ಮಾರ ಆಕ್ಷೇಪಾರ್ಹ ಹೇಳಿಕೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ನಗರದಲ್ಲೂ ನಡೆಯುವ ಸಾಧ್ಯತೆಯಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ತಡೆಯಲು ನಗರದಾದ್ಯಂತ ಆಯಾ ಠಾಣಾ ವ್ಯಾಪ್ತಿಯಲ್ಲಿ ಮುಸ್ಲಿಂ ಮುಖಂಡರೊಂದಿಗೆ ಪೊಲೀಸರು ಸಭೆ ನಡೆಸಿದ್ದಾರೆ.
ತಮ್ಮ ಠಾಣಾ ವ್ಯಾಪ್ತಿಯ ಮಸೀದಿ ಸೇರಿದಂತೆ ಮುಸ್ಲಿಂ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರನ್ನು ಕರೆದು ಸಭೆ ನಡೆಸಲಾಗಿದ್ದು, ಅನುಮತಿ ಇರದೇ ಯಾವುದೇ ರೀತಿಯ ಪ್ರತಿಭಟನೆಯಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ತೊಂದರೆ ಕೊಡದಂತೆ ಸೂಚನೆ ನೀಡಿದ್ದಾರೆ. ಮಾತ್ರವಲ್ಲದೇ, ತಮ್ಮ ತಮ್ಮ ಸಮುದಾಯದ ಜನರಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ.
ಇಂದು ಶ್ರೀರಾಂಪುರ ಠಾಣೆಯಲ್ಲಿ ನಡೆದ ಮುಸ್ಲಿಂ ಮುಖಂಡರ ಸಭೆಯ ಬಳಿಕ ಮಾತನಾಡಿದ ಮುಸ್ಲಿಂ ಮುಖಂಡ ಸೈಯದ್ ತಬ್ರೇಜ್ 'ನಮ್ಮ ವ್ಯಾಪ್ತಿಯಲ್ಲಿ ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದೇವೆ. ಯಾವುದೇ ಅನುಮತಿ ರಹಿತ ಪ್ರತಿಭಟನೆ ನಡೆಸುವ ಮೂಲಕ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾ ಹೇಳಿಕೆ: ಹೌರಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಪೊಲೀಸರ ಮೇಲೆ ಕಲ್ಲು ತೂರಾಟ!