ಬೆಂಗಳೂರು: ಕೇಂದ್ರದ ಉದ್ದೇಶಿತ ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಇದೇ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಕೆಲವರು ಪ್ರತಿಭಟಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಗರ ಕೇಂದ್ರ ವಿಭಾಗದ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಸಿಎಎ ವಿರೋಧಿಸಿ ದೇಶದೆಲ್ಲೆಡೆ ಪರ-ವಿರೋಧ ವ್ಯಕ್ತವಾಗಿತ್ತು. ಮಂಗಳವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ಕೆಲವರು ಸಿಎಎ ವಿರೋಧಿಸುವ ಬರಹವಿರುವ ಟಿ ಶರ್ಟ್ ಧರಿಸಿ ಪ್ರತಿಭಟಿಸಿದ್ದರು. ಇದೇ ರೀತಿ ಅಂತಿಮ ಏಕದಿನ ಪಂದ್ಯದಲ್ಲಿಯೂ ಕೆಲವರು ಕ್ರೀಡಾಭಿಮಾನಿಗಳ ಸೋಗಿನಲ್ಲಿ ಮೈದಾನದೊಳಗೆ ಬಂದು ಪ್ರತಿಭಟಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಿದ್ದಾರೆ ಎಂಬ ಗುಪ್ತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮೈದಾನದೊಳಗೆ ಎಂದಿನಂತೆ ಪ್ರತಿಭಟನೆಗೆ ಸಂಬಂಧಿಸಿದ ವಸ್ತುಗಳು, ಸಿಎಎ ವಿರೋಧ ವ್ಯಕ್ತಪಡಿಸುವ ಸ್ಲೋಗನ್ಗಳು ಇರುವ ಟಿ-ಶರ್ಟ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ.
ಇತ್ತೀಚೆಗೆ ಚರ್ಚ್‌ಸ್ಟ್ರೀಟ್ ಅಂಗಡಿ ಹಾಗೂ ಗೋಡೆಗಳ ಮೇಲೆ ಫ್ರೀ ಕಾಶ್ಮೀರ್, ನೋ ಸಿಎಎ, ನೋ ಎನ್ಆರ್ಸಿ ಎಂಬ ಪ್ರಚೋದನಕಾರಿ ಬರಹಗಳನ್ನು ಬಣ್ಣದ ಮೂಲಕ ಕಿಡಿಗೇಡಿಗಳು ಪ್ರಕಟಿಸಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಪಂದ್ಯ ನಡೆಯುವ ಹಿಂದಿನ ದಿನದಿಂದಲೇ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತಲೂ ಪೊಲೀಸರು ಬಂದೋಬಸ್ತ್ ಮಾಡಲು ಮುಂದಾಗಿದ್ದಾರೆ.