ಬೆಂಗಳೂರು: ಕೊರೊನಾ ಹಿನ್ನೆಲೆ ಲಾಕ್ಡೌನ್ ಟೈಂನಲ್ಲಿ ಸಿಲಿಕಾನ್ ಸಿಟಿಯಲ್ಲಿ ಕ್ರೈಂ ಪ್ರಕರಣಗಳು ಕಡಿಮೆಯಾಗಿದ್ದವು. ಆದರೆ ಲಾಕ್ಡೌನ್ ರಿಲೀಫ್ ಬಳಿಕ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರ್ತಿವೆ. ಕೊರೊನಾ ಬಂದ ಬಳಿಕ ಬಹುತೇಕ ಸಿಲಿಕಾನ್ ಸಿಟಿಯಲ್ಲಿ ವಾಸ ಮಾಡುವ ಕಾರ್ಪೋರೇಟ್ ಕಂಪನಿ ಮಂದಿಗೆ ವರ್ಕ್ ಫ್ರಂ ಹೋಮ್ ನೀಡಿರುವ ಕಾರಣ ತಮ್ಮ ತಮ್ಮ ಹಳ್ಳಿಗಳ ಕಡೆಗೆ ಮುಖ ಮಾಡಿದ್ದಾರೆ. ಆದರೆ ಕೆಲವರು ರೂಂಗಳಲ್ಲಿರುವ ಎಲ್ಲಾ ವಸ್ತುಗಳನ್ನು ಖಾಲಿ ಮಾಡದೆ ಹಾಗೆಯೇ ಹೋಗಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಗಳ್ಳತನ ಮಾಡುವ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಜನನಿಬಿಡವಲ್ಲದ ಪ್ರದೇಶಗಳನ್ನ ಟಾರ್ಗೆಟ್ ಮಾಡಿ ಕ್ಷಣಾರ್ಧದಲ್ಲಿ ಮನೆ ಲೂಟಿ ಮಾಡುತ್ತಾರೆ.
ಮನೆಕಳ್ಳತನ ಮಾಡುವವರ ಟಾರ್ಗೆಟ್ ಹೀಗಿರುತ್ತೆ..
ಮನೆಕಳ್ಳತನ ಮಾತ್ರ ಮಾಡುವವರು ಮೊದಲು ಬಾಗಿಲು ಹಾಕಿರುವ ಮನೆ, ಜನರ ಓಡಾಟ ಇಲ್ಲದ ಪ್ರದೇಶ, ಹಾಕಿರುವ ಪೇಪರ್ಗಳು ಹಾಗೇ ಬಿದ್ದಿರುವ ಮನೆ, ಹೊರಗಡೆ ರಂಗೋಲಿ ಹಾಕದೆ ಇರುವ ಮನೆ, ಒಂಟಿಯಾಗಿ ಇರುವ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಹಗಲು ಹೊತ್ತು ಬೈಕ್ ಅಥವಾ ಆಟೋಗಳಲ್ಲಿ ವೀಕ್ಷಣೆ ಮಾಡಿ ಸಿಸಿಟಿವಿಗಳಿದ್ದರೆ ಅದನ್ನು ತಮಗೆ ಬೇಕಾದ ಹಾಗೆ ತಿರುಗಿಸಿ ಹೋಗುತ್ತಾರೆ. ಬಳಿಕ ರಾತ್ರಿ ಹೊತ್ತು ಮನೆ ಬಾಗಿಲಿಗೆ ಬಂದು ಬೀಗ ಹಾಕಿರುವ ಮನೆಗಳನ್ನು ಕ್ಷಣಾರ್ಧದಲ್ಲಿ ಮೀಟಿ ಕಳ್ಳತನ ಮಾಡ್ತಾರೆ.
ಇನ್ನು ಬಹುತೇಕ ಮನೆಗಳ ಸದಸ್ಯರು ಮನೆಗೆ ಬಂದು ನೋಡಿದಾಗ ಮಾತ್ರ ಮನೆಯ ಪರಿಸ್ಥಿತಿ ಗೊತ್ತಾಗುತ್ತದೆ. ಅದರಲ್ಲೂ ಸದ್ಯ ಕೊರೊನಾ ಬಂದ ಬಳಿಕ ಬಹುತೇಕ ಮಂದಿ ಕೆಲಸವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಹಣಕ್ಕೆ ಪರದಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಂಪನಿಗಳು ತಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡುವ ಕೆಲಸಗಾರರನ್ನ ಕೆಲಸದಿಂದ ತೆಗೆದು ಹಾಕಿವೆ. ಹೀಗಾಗಿ ಬಹುತೇಕ ಮಂದಿ ಕೆಲಸ ಕಳೆದುಕೊಂಡಿದ್ದು, ದುಡ್ಡಿಗಾಗಿ ಕಳ್ಳತನದ ಹಾದಿ ಹಿಡಿದಿದ್ದಾರೆ. ಖಾಲಿ ಇರುವ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡ್ತಿದ್ದಾರೆ.
ಸದ್ಯ ಸಿಟಿಯಲ್ಲಿ ಉತ್ತರ ವಿಭಾಗ, ದಕ್ಷಿಣ ವಿಭಾಗ, ಆಗ್ನೇಯ ವಿಭಾಗ ವ್ಯಾಪ್ತಿಯಲ್ಲಿ ಬಹುತೇಕ ಕಳ್ಳತನ ಪ್ರಕರಣಗಳು ಬೆಳಕಿಗೆ ಬರ್ತಿವೆ. ಇದನ್ನು ತಡೆಗಟ್ಟಲು ಪೊಲೀಸರು ಕೈಗೊಂಡ ಕ್ರಮ ಹೀಗಿದೆ.
- ಊರಿಗೆ ಹೋಗುವಾಗ ಪಕ್ಕದ ಮನೆಯವರಿಗೆ ಸ್ವಲ್ಪ ನೋಡಿಕೊಳ್ಳಿ ಎಂದು ಹೇಳುವಂತಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು. ಪೊಲೀಸರು ಬೀಟ್ ವ್ಯವಸ್ಥೆ ಮಾಡಲಿದ್ದಾರೆ.
- ಆಂಧ್ರ ಪ್ರದೇಶದಲ್ಲಿ ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಆದರೆ ಅದನ್ನು ನಗರದಲ್ಲಿ ಕಾರ್ಯರೂಪಕ್ಕೆ ತರಲು ಇನ್ನೂ ಕೆಲಸಗಳು ನಡೆಯುತ್ತಿವೆ.
- ಇದು ಉಚಿತವಾದ ವ್ಯವಸ್ಥೆಯಾಗಿದ್ದು, ಊರಿಗೆ ಹೋಗುವ ಮೊದಲು ಪೊಲೀಸರಿಗೆ ಮಾಹಿತಿ ನೀಡಿದರೆ ಪೊಲೀಸರೇ ಮನೆ ಬಾಗಿಲಿಗೆ ಬಂದು ಸುಧಾರಿತ ತಂತ್ರಜ್ಞಾನ ಕ್ಯಾಮರಾ ಅಳವಡಿಕೆ ಮಾಡ್ತಾರೆ. ಇದರಿಂದ ಮನೆ ಮುಂದೆ ಓಡಾಟ ಅಥವಾ ಬಾಗಿಲು ಮುರಿಯುವ ದೃಶ್ಯ ಕಂಟ್ರೋಲ್ ರೂಂಗೆ ರವಾನೆಯಾಗಲಿದೆ.
- ಆಂಧ್ರ ಪ್ರದೇಶದ ರೀತಿ ಇಲ್ಲಿ ಕೂಡ ಆ್ಯಪ್ ಅಭಿವೃದ್ಧಿ ಮಾಡಲು ಪೊಲೀಸರು ಮುಂದಾಗಿದ್ದಾರೆ.
- ಆಂಧ್ರ ಪ್ರದೇಶದಲ್ಲಿ ಎಲ್.ಎಚ್.ಎಂ ಎಸ್ ಆ್ಯಪ್ ಡೌನ್ ಲೋಡ್ ಮಾಡಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನಮೂದು ಮಾಡಬೇಕು.
- ಆ್ಯಪ್ನಲ್ಲಿ ಮನೆ ಮಾಲೀಕರ ಮಾಹಿತಿ ಇರುವ ಕಾರಣ ಊರಿಗೆ ಹೋದಾಗ ಮನೆಯ ಮುಂದಿನ ಚಿತ್ರಣವನ್ನು ವೀಕ್ಷಣೆ ಮಾಡಬಹುದಾಗಿದೆ.
- ಬೆಲೆ ಬಾಳುವ ಚಿನ್ನಾಭರಣ ಇಟ್ಟಿದ್ದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ. ಅವರು ಮನೆಯ ಬಳಿ ಬಂದು ಬೀಟ್ ವ್ಯವಸ್ಥೆ ಮಾಡಲಿದ್ದಾರೆ. ಹಾಗೆ ಈಗಾಗಲೇ ಜಿಲ್ಲೆಯಲ್ಲಿ ಕೆಲವೊಂದು ಆ್ಯಪ್ ಬಳಕೆ ಮಾಡಿದ್ದಾರೆ. ಆದರೆ ನಗರದಲ್ಲಿ ಕೋಟಿ ಕೋಟಿ ಜನ ಇರುವ ಕಾರಣ ಆ್ಯಪ್ಗಳ ಬಳಕೆ ಮಾಡಿಕೊಳ್ಳುವುದು ಕಷ್ಟಕರ. ಹೀಗಾಗಿ ನಗರದಲ್ಲಿ ತಂತ್ರಜ್ಞಾನ ಬೆಳವಣಿಗೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
- ಮನೆ ಬಿಟ್ಟು ಸಂಬಂಧಿಕರ ಮನೆಗೆ ಹೊಗುವಾಗ ಸೋಷಿಯಲ್ ಮಿಡಿಯಾದಲ್ಲಿ ಅನಾಮಿಕರ ಜೊತೆ ಮಾಹಿತಿ ಹಂಚಬಾರದು.
- ಮನೆ ಬಾಗಿಲಿಗೆ ಹಾಕುವ ಕೀ ಯಾವಾಗಲು ಬಹಳ ಗಟ್ಟಿಯಾಗಿರಬೇಕು.
ಇನ್ನು ಇದರ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಮನೆಗಳ್ಳತನ ನಗರದಲ್ಲಿ ಅಷ್ಟೊಂದು ಆಗಿಲ್ಲ. ಲಾಕ್ಡೌನ್ ನಂತ್ರ ಕೆಲವು ಕಡೆ ಮನೆಗಳ್ಳತನ ಆಗಿದೆ. ಇನ್ನು ಆಂಧ್ರ ಪ್ರದೇಶದಲ್ಲಿ ಆದ ಹಾಗೆ ಇಲ್ಲಿ ಆಗಿಲ್ಲ. ಈಗಾಗಲೇ ಇ-ಲಾಸ್ಟ್ ವ್ಯವಸ್ಥೆ ಮಾಡಿದ್ದಾರೆ. ಅದರಲ್ಲಿ ದೂರು ಕೂಡ ನೀಡಬಹುದು. ಆದರೆ ಮನೆಗಳ್ಳತನ ಪ್ರಕರಣ ನಡೆದಾಗ ಠಾಣೆಗೆ ಬಂದು ದೂರು ನೀಡಿದರೆ ಪೊಲೀಸರು ಪ್ರಕರಣ ಪತ್ತೆ ಹಚ್ಚಲು ಸಹಾಯಕವಾಗುತ್ತದೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಅಪರಾಧ ನಡೆದಿಲ್ಲ. ಆದರೆ ಲಾಕ್ಡೌನ್ ರಿಲೀಫ್ ಬಳಿಕ ಬಹಳ ಅಪರಾಧ ಪ್ರಕರಣಗಳು ನಡೆದಿವೆ. ಪೊಲೀಸರು ಇದನ್ನು ಪತ್ತೆ ಮಾಡಿ ಕೆಲವೊಂದು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಸದ್ಯ ಊರು ಬಿಟ್ಟು ಬೇರೆ ಬೇರೆ ಕಡೆ ಟ್ರಾವೆಲ್ ಮಾಡುವಾಗ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ. ಈ ಸಂದರ್ಭದಲ್ಲಿ ಮನೆ ಬಳಿ ಗಸ್ತು ತಿರುಗಲು ಬೀಟ್ ವ್ಯವಸ್ಥೆ, ಹೊಯ್ಸಳ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.