ಬೆಂಗಳೂರು:
ಮೊಬೈಲ್ ಕರೆಯ ಜಾಡು ಹಿಡಿದು ಕೊಲೆ ಮಾಡಿ ಹೂತು ಹಾಕಲಾಗಿದ್ದ ಯುವಕನ ಶವವನ್ನ ಪೊಲೀಸರು ಪತ್ತೆ ಹಚ್ಚಿರುವ ಘಟನೆ ಚೆಳ್ಳೂರಿನ ಅರಣ್ಯ ಪ್ರದೇಶದಲ್ಲಿ ನಡೆದಿದೆ. ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಕಾರಣಕ್ಕೆ ಯುವಕನನ್ನು ಅಪಹರಿಸಿ ಬಳಿಕ ಆತನನ್ನ ಕೊಲೆ ಮಾಡಿ ಹೂತು ಹಾಕಲಾಗಿತ್ತು.
ಬನ್ನೇರುಘಟ್ಟ ರಸ್ತೆಯ ಸಿಕೆಪಾಳ್ಯ ನಿವಾಸಿ ಅಜಯ್ ಎಂಬುವರು ಕಳೆದ ಸೋಮವಾರ ಕೆಲಸ ಮುಗಿಸಿ ಮನೆಗೆ ಹೋಗಿರಲಿಲ್ಲ. ಈ ಸಂಬಂಧ ಆತನ ಪೋಷಕರು ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಅಜಯ್ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬುದು ತಿಳಿಯಿತು. ಇದಕ್ಕೂ ಮುನ್ನ ಅಜಯ್ ಮೊಬೈಲ್ನಿಂದಲೇ ಪೋಷಕರಿಗೆ ಕೊಲೆಗಡುಕರು ಕರೆ ಮಾಡಿ,ನಾವು ಪೊಲೀಸರು ನಿಮ್ಮ ಮಗನನ್ನು ಹಿಡಿದುಕೊಂಡಿದ್ದೇವೆ. ಮತ್ತೆ ಈ ನಂಬರ್ಗೆ ಕರೆ ಮಾಡಬೇಡಿ ಎಂದು ಹೇಳಿ ಆತನ ಮೊಬೈಲ್ ಸ್ವಿಚ್ಆಫ್ ಮಾಡಿದ್ದರು.
ಮೊಬೈಲ್ ಕರೆ ಜಾಡು ಹಿಡಿದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಚೆಳ್ಳೂರಿನ ಅರಣ್ಯ ಪ್ರದೇಶದಲ್ಲಿ ಶವ ಹೂತು ಹಾಕಿರುವುದನ್ನು ಪತ್ತೆ ಹಚ್ಚಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಮೇರೆಗೆ ಇಂದು ಹೂತು ಹಾಕಿದ್ದ ಶವ ಹೊರ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.