ಬೆಂಗಳೂರು: ಇಂದು ಒಂದೇ ದಿನ 1500 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸಿದ್ದೇನೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಓದಿ: ಬಾಗಲಕೋಟೆ: ಅನಗತ್ಯವಾಗಿ ಓಡಾಡುವವರಿಗೆ ಪೊಲೀರಿಂದ ಹೂವಿನ ಹಾರ ಹಾಕಿ ಸನ್ಮಾನ
ರಾಜ್ಯ ಸರ್ಕಾರ ಲಾಕ್ಡೌನ್ ಮುಂದುವರೆಸಿ ಅದೇಶಿಸಿದ್ದು, ಜೂನ್ 7ರ ಬೆಳಗ್ಗೆ 6 ಗಂಟೆಯವರೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ನಿನ್ನೆ ರಾತ್ರಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಕೂಡ ಮಾಹಿತಿ ನೀಡಿದ್ದರು.
ಈ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನೆಡೆಸಿ, ನಗರ ಪೊಲೀಸರು ಕಾನೂನಡಿಯಲ್ಲಿ ಲಾಕ್ಡೌನ್ ಜಾರಿಗೊಳಿಸಿದ್ದಾರೆ. ಎಲ್ಲೆಡೆ ಬಹುತೇಕ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.
ಎಲ್ಲಿಯೂ ಹೋಟೆಲ್, ಮಾಲ್, ಅಂಗಡಿಗಳು ಅನಗತ್ಯವಾಗಿ ಓಪನ್ ಮಾಡಲಾಗುವುದಿಲ್ಲ. ಇದೇ ರೀತಿ ಮುಂದುವರೆದರೆ ಲಾಕ್ಡೌನ್ ಯಶಸ್ವಿಯಾಗುವ ಭರವಸೆ ಇದೆ ಎಂದು ಅಭಿಪ್ರಾಯಪಟ್ಟರು. ಕೆಲವು ಕಡೆಗಳಲ್ಲಿ ಅನಗತ್ಯವಾಗಿ ಹೊರಬಂದವರ ವಾಹನಗಳನ್ನ ಸೀಜ್ ಮಾಡಲಾಗಿದೆ. 1500 ವಾಹನಗಳು ಈಗಾಗಲೇ ಜಪ್ತಿಯಾಗಿವೆ. ಸದ್ಯದವರೆಗೆ ಲಾಕ್ಡೌನ್ ಬಹುತೇಕ ಯಶಸ್ವಿಯಾಗಿದೆ. ಸುಳ್ಳು ನೆಪ ಹೇಳುವವರ ವಾಹನಗಳನ್ನ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಪೂರ್ಣವಾಗಿ ವಿಚಾರಣೆ ಬಳಿಕ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ. ಲಾಕ್ಡೌನ್ ಅಂದರೆ ಜನರು ಎಲ್ಲಿಯೂ ಗುಂಪು ಸೇರಬಾರದು. ವಾಹನಗಳ ಓಡಾಟ ಇರುವುದು ನಿಜ. ಏಕೆಂದರೆ ಒಂದಷ್ಟು ಚಟುವಟಿಕೆಗಳಿಗೆ ವಿನಾಯಿತಿ ಇದೆ ಎಂದು ಹೇಳಿದರು. ದಿನಕ್ಕೆ ಸರಾಸರಿ ಸಾವಿರಾರು ವಾಹನಗಳು ಜಪ್ತಿಯಾಗ್ತಿವೆ, ಮುಂದೆಯೂ ಆಗಲಿದೆ. ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ ಖಂಡಿತಾ. ಅನಗತ್ಯವಾಗಿ ಮನೆಯಿಂದ ಹೊರಬರುವವರ ವಾಹನ ಜಪ್ತಿಯಾಗಲಿದೆ. ಮೊದಲು ಸ್ಥಳದಲ್ಲೇ ವಿಚಾರಣೆಯಾಗಲಿದ್ದು, ನಂತರ ಅಂತವರ ವಿರುದ್ಧ ಎನ್.ಡಿ.ಎಂ.ಎ ಅಥವಾ ಕೆ.ಇ.ಡಿ ಕಾಯ್ದೆಯಡಿ ಪ್ರಕರಣ ದಾಖಲಾಗಲಿದೆ ಎಂದು ಮಾಹಿತಿ ನೀಡಿದರು.
ಲಾಕ್ಡೌನ್ ಜಾರಿಗೆ ಪೊಲೀಸರು ಶ್ರಮ ವಹಿಸುತ್ತಿದ್ದಾರೆ, ಮುಂದೆಯೂ ಜನರ ಸಹಕಾರ ಹೀಗೆಯೇ ಇರಬೇಕು ಎಂದು ಮನವಿ ಮಾಡುತ್ತೇನೆ. ಅನಗತ್ಯವಾಗಿ ಹೊರಗಡೆ ಬರಬೇಡಿ ಎಂದು ಮಾಧ್ಯಮಗಳ ಮೂಲಕ ಮನವಿ ಮಾಡುತ್ತಿದ್ದೇನೆ ಎಂದು ವಿನಂತಿಸಿದರು.
ಲಾಕ್ಡೌನ್ ನಿಯಮಗಳ ಜಾರಿಗೆ ಪೊಲೀಸರೊಂದಿಗೆ ಸಹಕರಿಸಿ, ಒಗ್ಗಟ್ಟಿನಿಂದ ಕೋವಿಡ್ 19 ಪರಿಸ್ಥಿತಿ ಗೆಲ್ಲೋಣ. ನಿಯಮ ಉಲ್ಲಂಘಿಸಿದರೆ ವಾಹನಗಳ ಜಪ್ತಿ ಮಾಡಿ ಪ್ರಕರಣ ದಾಖಲಿಸುತ್ತೇವೆ. ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಬೆಂಗಳೂರಿಗರಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂದ್ಫಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.