ಬೆಂಗಳೂರು : ವಾಟ್ಸ್‌ಆ್ಯಪ್ ಸ್ಟೇಟಸ್ ಹಾಗೂ ಪ್ಲಾಟ್ ಹಣದ ವಿಚಾರದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಮೋಹನ್ ಮತ್ತು ನಾಗರಾಜು ಎನ್ನುವವರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಾರ್ತಿಕ್ 61 ಲಕ್ಷ ರೂ.ನಂತೆ ಎರಡು ಪ್ಲಾಟ್ ಅಗ್ರಿಮೆಂಟ್ ಮಾಡಿಕೊಂಡಿದ್ದ. 40 ಲಕ್ಷ ರೂ. ಮಾತ್ರ ಕೊಟ್ಟು ಉಳಿದ ಹಣ ಕೊಡದೇ ಸತಾಯಿಸುತ್ತಿದ್ದ. ಅಲ್ಲದೆ ಎರಡೂ ಮನೆಗಳ ಮಧ್ಯೆ ಇದ್ದ ಗೋಡೆಯನ್ನು ಕೆಡವಿ ಒಂದೇ ಮನೆ ನಿರ್ಮಾಣ ಮಾಡಿದ್ದ. ಇದರಿಂದ ಕಟ್ಟಡಕ್ಕೆ ತೊಂದರೆ ಆಗುತ್ತೆ ಎಂದರೂ ಕಾರ್ತಿಕ್ ಕೇರ್ ಮಾಡಿರಲಿಲ್ಲ. ಈ ಕುರಿತು ಹಲವು ಬಾರಿ ದೂರನ್ನು ಸಹ ಅಪಾರ್ಟ್ಮೆಂಟ್ ನಿವಾಸಿಗಳು ನೀಡಿದ್ದರು.
ಪ್ಲಾಟ್ ನಿರ್ವಹಣೆ ಜವಾಬ್ದಾರಿಯನ್ನು ಮೋಹನ್ ಎಂಬುವರಿಗೆ ಮಾಲೀಕರು ವಹಿಸಿದ್ದರು. ಜೊತೆಗೆ ಮಾಲೀಕನ ಹಲವು ವ್ಯವಹಾರವನ್ನು ಮೋಹನ್ ನೋಡಿಕೊಳ್ಳುತ್ತಿದ್ದ. ಮೋಹನ್ ಏನೇ ವ್ಯವಹಾರ ಮಾಡಲು ಹೋದರೂ ಕಾರ್ತಿಕ್ ಅಡ್ಡಗಾಲು ಹಾಕುತ್ತಿದ್ದ. ಹೀಗಿರುವಾಗ ಮಾಲೀಕನ ಮಗಳಿಗೂ ಮೋಹನ್ಗೂ ವಿವಾಹೇತರ ಸಂಬಂಧ ಇದೆ ಎಂಬ ವಾಟ್ಸ್‌ಆ್ಯಪ್ ಸ್ಟೇಟಸ್ ಕೂಡ ಹಾಕಿದ್ದ.
ಇದರಿಂದ ರೋಸಿ ಹೋಗಿದ್ದ ಮೋಹನ್, ಕಾರ್ತಿಕ್ ಕೊಲೆ ಮಾಡಲು ನಿರ್ಧರಿಸಿದ್ದ. ಜೂನ್ 16ರಂದು ರಾತ್ರಿ 7 ಗಂಟೆ ಸುಮಾರಿಗೆ ಕಾರ್ತಿಕ್ ವಾಸವಿದ್ದ ಅಪಾರ್ಟ್‌ಮೆಂಟ್ ರಸ್ತೆಯಲ್ಲಿ ಬೈಕ್ನಲ್ಲಿ ಬರುತ್ತಿದ್ದಾಗ ಸ್ನೇಹಿತನ ಜೊತೆ ಸೇರಿ ಬೈಕ್ ಅಡ್ಡಗಟ್ಟಿದ ಮೋಹನ್ ಜಗಳವಾಡಿ ಅಲ್ಲೇ ಇದ್ದ ಸಿಮೆಂಟ್ ಇಟ್ಟಿಗೆಯನ್ನು ತಲೆ ಮೇಲೆ ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.