ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ದರ ದಿಢೀರ್ ಇಳಿಕೆ ಹಿನ್ನೆಲೆಯಲ್ಲಿ ಬಂಕ್ ಮಾಲೀಕರಿಗೆ ಉಂಟಾದ ನಷ್ಟ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 31 ರಂದು ಪೆಟ್ರೋಲ್ ಬಂಕ್ ಮಾಲೀಕರು ತೈಲ ಖರೀದಿ ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಕ್‌ಗಳಲ್ಲಿ ಇಂಧನ ವ್ಯತ್ಯಯ ಉಂಟಾಗಬಹುದು.
2017 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ 1 ರೂ. ಕಮಿಷನ್ ನೀಡಬೇಕೆಂದು ಫೆಡರೇಷನ್ ಬೇಡಿಕೆ ಇಟ್ಟಿತ್ತು. ಅಂದಿನಿಂದ ಇಂದಿನವರೆಗೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ, ವಿಧಿಯಿಲ್ಲದೆ ತೈಲ ಡಿಪೋಗಳಿಂದ ಇಂಧನ ಖರೀದಿ ಮಾಡದೆ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದು ಫೆಡರೇಷನ್ ತಿಳಿಸಿದೆ.
ಸರ್ಕಾರಕ್ಕೆ ಎಚ್ಚರಿಕೆ ಸಂದೇಶ: 2011ರಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದಿಗೆ ಹೋಲಿಕೆ ಮಾಡಿದ್ರೆ ದ್ವಿಗುಣವಾಗಿದೆ. ಕಮಿಷನ್ ಹೆಚ್ಚಳ ಮಾಡಬೇಕೆಂದು ಕೇಂದ್ರ, ಪೆಟ್ರೋಲಿಯಂ ಸಚಿವರಿಗೆ ಹಾಗೂ ರಾಜ್ಯದ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಸರ್ಕಾರಕ್ಕೆ ಎಚ್ಚರಿಕ ಸಂದೇಶ ರವಾನಿಸಬೇಕೆಂಬ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಮಾರಾಟಗಾರರು ತಿಳಿಸಿದ್ದಾರೆ.
ಬಂಕ್ ನಡೆಸುವುದೇ ಕಷ್ಟ: ಬಂಕ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಬೇಕು. ಅಲ್ಲದೇ, ಕಂಪನಿಗಳ ಡೀಲರ್ಗಳು ಬಂಕ್‌ಗಳಲ್ಲಿ ಸಿಬ್ಬಂದಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಸೂಚನೆ ನೀಡಿದೆ. ಶೌಚಾಲಯ, ತಿಂಡಿ, ಊಟದ ವ್ಯವಸ್ಥೆ, ಶುಚಿತ್ವ ಹೀಗೆ ಎಲ್ಲವನ್ನೂ ನಿರ್ವಹಿಸಬೇಕಾಗಿರುವುದರಿಂದ ಬಂಕ್ಗಳನ್ನು ನಡೆಸುವುದೇ ದುಸ್ತರವಾಗಿದೆ ಎಂದಿದೆ.
ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲ: ಕೇಂದ್ರ ಅಥವಾ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ಐದು ವರ್ಷವಾದರೂ ಬೇಡಿಕೆ ಈಡೇರಿಸದ ಕಾರಣ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಕೇಂದ್ರ ಸರ್ಕಾರ ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಪ್ರತಿ ದಿನ ಲೀಟರ್‌ಗೆ ಪೈಸೆಗಳಲ್ಲಿ ಏರಿಕೆ ಮಾಡಿದ್ದರು. ಆದರೆ, ಕಳೆದ ವಾರ ಇದ್ದಕ್ಕಿದ್ದಂತೆ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಸುಮಾರು 10 ರೂ. ಕಡಿತ ಮಾಡಿತು. ಇದರಿಂದ ಪ್ರತಿಯೊಂದು ಬಂಕ್‌ಗಳಿಗೆ ಕನಿಷ್ಠ 5 ರಿಂದ 25 ಲಕ್ಷವರೆ ನಷ್ಟವಾಗುತ್ತಿದೆ. ಮೊದಲೇ ಸಂಕಷ್ಟದಲ್ಲಿರುವ ನಮ್ಮ ಮೇಲೆ ಕೇಂದ್ರ ಸರ್ಕಾರ ಬರೆ ಎಳೆದಿದೆ ಎಂದು ಫೆಡರೇಷನ್ ಹೇಳಿದೆ.
ಮುಖ್ಯಮಂತ್ರಿ ಬೊಮ್ಮಾಯಿಗೆ ಮನವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವೋಸ್‌ನಿಂದ ಹಿಂದಿರುಗಿದ ತಕ್ಷಣವೇ ಭೇಟಿಯಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಲಿದ್ದೇವೆ. ಅಲ್ಲದೇ, ಶೀಘ್ರದಲ್ಲೇ ಕೇಂದ್ರ ಪೆಟ್ರೋಲಿಯಂ ಸಚಿವರನ್ನು ಸಹ ಭೇಟಿ ಮಾಡಲಿದ್ದೇವೆ, ನಾವು ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರತಿಭಟನೆ ನಡೆಸುವ ಉದ್ದೇಶ ಹೊಂದಿಲ್ಲ. ನಮ್ಮ ಪ್ರತಿಭಟನೆಗೆ ಸಾರ್ವಜನಿಕರು ಕೂಡ ಕೈ ಜೋಡಿಸಬೇಕೆಂದು ಫೆಡರೇಷನ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅಜ್ಮೀರ್ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಒಂದು ಕಾಲದಲ್ಲಿ ದೇವಸ್ಥಾನ: ಹಿಂದೂ ಸಂಘಟನೆ